ಸೋನಿಯಾ ಗಾಂಧಿಗೆ ಇನ್ನೊಂದು ಪತ್ರ; ಮುಜುಗರ ತಂದಿಡುವ ವಿಷಯಗಳೇ ಎಲ್ಲ !

Sonia Gandhi
Published on

ನವದೆಹಲಿ: ಇತ್ತೀಚೆಗಷ್ಟೇ ಕಾಂಗ್ರೆಸ್​ ಅಧ್ಯಕ್ಷರ ಆಯ್ಕೆ ಸಂಬಂಧ, ಮುಖಂಡರೆಲ್ಲ ಸೇರಿ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದಿದ್ದರು. ನಂತರ ರಾಹುಲ್ ಗಾಂಧಿ, ಕಾಂಗ್ರೆಸ್​ ನಾಯಕರೆಲ್ಲ ಬಿಜೆಪಿಯೊಂದಿಗೆ ಸೇರಿಕೊಂಡು ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅದು ದೊಡ್ಡ ವಿವಾದವನ್ನೇ ಸೃಷ್ಟಿಸಿತ್ತು. ಅದಾದ ಮೇಲೆ ಎಐಸಿಸಿಗೆ ಶೀಘ್ರವೇ ಹೊಸ ಅಧ್ಯಕ್ಷರ ನೇಮಕವಾಗುತ್ತದೆ. ಅಲ್ಲಿಯವರೆಗೆ ಸೋನಿಯಾ ಗಾಂಧಿಯವರೇ ಮುಂದುವರಿಯಲಿದ್ದಾರೆ ಎಂಬ ಹೇಳಿಕೆಯೊಂದಿಗೆ ಆ ಎಲ್ಲ ಪ್ರಹಸನಕ್ಕೆ ಫುಲ್​ಸ್ಟಾಪ್​ ಬಿದ್ದಿತ್ತು.

ಆದರೆ ಈಗ ಕಾಂಗ್ರೆಸ್​​ನಲ್ಲಿ ಇನ್ನೊಂದು ಪತ್ರ ಸೋನಿಯಾ ಗಾಂಧಿಯವರ ಕೈ ಸೇರಿದ್ದು, ಇಡೀ ಕಾಂಗ್ರೆಸ್​​ಗೆ ದೊಡ್ಡ ಮುಜುಗರವನ್ನುಂಟುಮಾಡಿದೆ. ಈ ಸಲ ಪತ್ರ ಬರೆದವರು ಉತ್ತರ ಪ್ರದೇಶದ ಮಾಜಿ ಕಾಂಗ್ರೆಸ್ ನಾಯಕರು. ಅಂದರೆ ಕಳೆದ ವರ್ಷ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದ 9 ಮುಖಂಡರು ಮಧ್ಯಂತರ ಅಧ್ಯಕ್ಷೆಗೆ ನಾಲ್ಕು ಪುಟಗಳ ಪತ್ರ ಬರೆದು, ನಿಮ್ಮ ಕುಟುಂಬದ ಹೊರತಾಗಿ ಯೋಚಿಸಿ..ಪಕ್ಷವನ್ನು ಕುಟುಂಬಕ್ಕಿಂತ ಮೇಲೆ ತೆಗೆದುಕೊಂಡು ಬನ್ನಿ. ಕಾಂಗ್ರೆಸ್​ ಪಕ್ಷ ' ಇತಿಹಾಸ' ಆಗುವ ಮೊದಲು ಅದನ್ನು ರಕ್ಷಿಸಿ ಎಂದು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಡುರಾತ್ರಿಯಲಿ ವಿಚಿತ್ರ ಘಟನೆ: ಜನರನ್ನೆಲ್ಲಾ ಇರಿದು ಹೋದ ನಿಗೂಢ ಕೈ!

ಮಾಜಿ ಎಂಪಿ ಸಂತೋಷ್​ ಸಿಂಗ್​, ಮಾಜಿ ಸಚಿವ ಸತ್ಯದೇವ್​ ತ್ರಿಪಾಠಿ, ಮಾಜಿ ಶಾಸಕರಾದ ವಿನೋದ್​ ಚೌಧರಿ, ಭೂದರ್​ ನಾರಿನ್​ ಮಿಶ್ರಾ, ನೆಕ್ಚಂದ್ ಪಾಂಡೆ, ಸ್ವಯಂ ಪ್ರಕಾಶ್ ಗೋಸ್ವಾಮಿ ಮತ್ತು ಸಂಜೀವ್ ಸಿಂಗ್ ಮತ್ತಿತರರು ಸಹಿ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಂತೂ ಕಾಂಗ್ರೆಸ್ ತುಂಬ ಕೆಳಮಟ್ಟಕ್ಕೆ ತಲುಪಿದೆ ಎಂದು ಕಿಡಿಕಾರಿದ್ದಾರೆ.

ನಾವು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ಕಳೆದ ಒಂದು ವರ್ಷದಿಂದಲೂ ಪ್ರಯತ್ನ ಮಾಡುತ್ತಲೇ ಇದ್ದೇವೆ. ಆದರೆ ಅಪಾಯಿಂಟ್​ಮೆಂಟ್​ ಸಿಗುತ್ತಿಲ್ಲ ಎಂದೂ ಆರೋಪಿಸಿದ್ದಾರೆ.  ಪ್ರಿಯಾಂಕಾ ಗಾಂಧಿಯೂ ಕೈಗೆ ಸಿಗುವುದಿಲ್ಲ. ಪಕ್ಷದ ಹುದ್ದೆಗಳೆಲ್ಲ ಸಂಬಳಕ್ಕಾಗಿ ಕೆಲಸ ಮಾಡುವವರ ಪಾಲಾಗಿದೆ. ಅವರ್ಯಾರೂ ಪ್ರಾಥಮಿಕ ಸದಸ್ಯತ್ವ ಹೊಂದಿರುವವರೂ ಅಲ್ಲ, ಪಕ್ಷದ ಸಿದ್ಧಾಂತವನ್ನು ಸರಿಯಾಗಿ ಅರ್ಥೈಸಿಕೊಂಡವರೂ ಅಲ್ಲ ಎಂದೂ ಪತ್ರದಲ್ಲಿ ಮುಖಂಡರು ತಿಳಿಸಿದ್ದಾರೆ. ಇದನ್ನೂ ಓದಿ: ಎಲೆಕ್ಟ್ರಾನಿಕ್ಸ್​ ಚಿಪ್​ ಅಳವಡಿಸಿ ಗ್ರಾಹಕರಿಗೆ ಮೋಸವೆಸಗುತ್ತಿದ್ದ 33 ಪೆಟ್ರೋಲ್​ ಬಂಕ್ಸ್​ ಸೀಜ್! ​

ಪ್ರಜಾಪ್ರಭುತ್ವದ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಹಿರಿಯ ಮುಖಂಡರನ್ನು ಟಾರ್ಗೆಟ್​ ಮಾಡಿ, ಅವಮಾನಿಸಿ, ಉಚ್ಚಾಟನೆ ಮಾಡಲಾಗುತ್ತಿದೆ. ಅದಕ್ಕಿಂತ ದುರಂತವೆಂದರೆ ನಮ್ಮನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂಬುದನ್ನು ನಾವು ಮಾಧ್ಯಮಗಳ ಮೂಲಕ ತಿಳಿದಿದ್ದು ಎಂದು ಪತ್ರದಲ್ಲಿ ಹಲವು ವಿಚಾರಗಳನ್ನು ಖಡಕ್​ ಆಗಿ ಬರೆದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net