ಅಭ್ಯರ್ಥಿ ಗೆಲುವಿಗೆ ಮುಖಂಡರ ಕಾರ್ಯತಂತ್ರ

jds meeting
ಕೋಲಾರ ನಗರದ ಎಂಎಲ್ಸಿ ಗೋವಿಂದರಾಜು ನಿವಾಸದಲ್ಲಿ ಶುಕ್ರವಾರ ನಡೆದ ಉಭಯ ಪಕ್ಷಗಳ ಮುಖಂಡರ ಚರ್ಚೆಯಲ್ಲಿ ಅಭ್ಯರ್ಥಿ ಎಂ.ಮಲ್ಲೇಶ್​ ಬಾಬು ಮಾತನಾಡಿದರು.
Published on

ಕೋಲಾರ: ನಾಮಪತ್ರ ಸಲ್ಲಿಕೆಯಾದ ಬೆನ್ನಲ್ಲೆ ಆಯಾ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಯಾವ ರೀತಿ ತಂತ್ರಗಾರಿಕೆ ಅನುಸರಿಸಬೇಕು ಎಂಬುದರ ಬಗ್ಗೆ ಕ್ಷೇತ್ರದಲ್ಲಿ ಬಿಸಿಬಿಸಿ ಚರ್ಚೆಗಳು ಶುರುವಾಗಿವೆ.

ನಗರದ ಪಿಸಿ ಬಡಾವಣೆಯಲ್ಲಿರುವ ವಿಧಾನಪರಿಷತ್​ ಸದಸ್ಯಇಂಚರ ಗೋವಿಂದರಾಜು ನಿವಾಸದಲ್ಲಿ ಶುಕ್ರವಾರ ಉಪಾಹಾರಕ್ಕೆ ಸೇರಿದ್ದ ಜೆಡಿಎಸ್​&ಬಿಜೆಪಿ ಪಕ್ಷಗಳ ಮುಖಂಡರು ಚುನಾವಣೆ ತಯಾರಿ ಕುರಿತು ಚರ್ಚೆ ನಡೆಸಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾ ಉಸ್ತುವಾರಿ ಕೇಶವ ಪ್ರಸಾದ್​, ಸಂಸದ ಎಸ್​.ಮುನಿಸ್ವಾಮಿ, ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್​, ರವಿಕುಮಾರ್​, ಅಭ್ಯರ್ಥಿ ಎಂ.ಮಲ್ಲೇಶ್​ ಬಾಬು, ವಿಧಾನ ಪರಿಷತ್​ ಮಾಜಿ ಸದಸ್ಯ ತೂಪಲ್ಲಿ ಚೌಡರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​, ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಮಾಜಿ ಶಾಸಕರಾದ ಕೆ.ಎಸ್​.ಮಂಜುನಾಥ್​ ಗೌಡ, ವರ್ತೂರು ಆರ್​.ಪ್ರಕಾಶ್​, ಮುಖಂಡರಾದ ಸಿಎಂಆರ್​ ಶ್ರೀನಾಥ್​, ಸೀಕಲ್​ ರಾಮಚಂದ್ರ ಗೌಡ, ರಾಮೇಗೌಡ ಸೇರಿ ಹಲವು ಮುಖಂಡರು, ಪದಾಧಿಕಾರಿಗಳು ಭಾಗಿಯಾಗಿದ್ದರು.
ಲೋಕಸಭೆ ಚುನಾವಣೆಯು ಕಾಂಗ್ರೆಸ್​ ಹಾಗೂ ಮೈತ್ರಿ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಪ್ರತಿಪಕ್ಷದಲ್ಲಿನ ಬದಲಾವಣೆಗಳ ಅನುಕೂಲತೆ ಹೇಗೆ ಪಡೆದುಕೊಳ್ಳಬೇಕು, ಪ್ರತಿ ಮನೆಯ ಮತದಾರನ್ನು ಹೇಗೆ ಸಂಪರ್ಕಿಸಬೇಕು. ಹೀಗೆ ಹಲವು ವಿಚಾರಗಳಲ್ಲಿ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಬೂತ್​ಮಟ್ಟದಿಂದ ಸಮನ್ವಯ ಸಮಿತಿ ರಚನೆ
ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಳಗೊಂಡಂತೆ ಬೂತ್​ಮಟ್ಟದಿಂದ ಸಮನ್ವಯ ಸಮಿತಿ ರಚನೆಯಾಗಬೇಕು, ಅದೇ ರೀತಿ ತಾಲೂಕು, ಜಿಲ್ಲಾಮಟ್ಟದಲ್ಲೂ ರಚನೆಯಾಗಬೇಕು. ಪ್ರತಿ ದಿನ ಆಗುವ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಪಕ್ಷ ಸಂಟನೆಯಿಲ್ಲದ ಕಡೆ ಸಭೆಗಳನ್ನು ನಡೆಸಿ ಮತಗಿಟ್ಟಿಸಿಕೊಳ್ಳುವ ಪ್ರಯತ್ನ ಯಾವ ರೀತಿ ಮಾಡಬೇಕು ಎಂಬುದರ ಕುರಿತು ಚರ್ಚೆಗಳಾಗಿವೆ. ಜತೆಗೆ ಬಲಗೈ ಸಮುದಾಯದ ಸಮಾವೇಶಕ್ಕೂ ತೀರ್ಮಾನಿಸಲಾಗಿದೆ.
ಅಂತೆಯೇ, ಬಿಜೆಪಿ&ಜೆಡಿಎಸ್​ ಮೈತ್ರಿಯಾಗಿರುವುದರಿಂದ ಉಭಯ ಪಕ್ಷಗಳ ಮುಖಂಡರಿಗೆ, ಕಾರ್ಯಕರ್ತರಿಗೆ ಯಾವುದೇ ಅಸಮಾಧಾನವಿಲ್ಲ. ಒಂದೇ ವೇದಿಕೆಯಲ್ಲಿ ಸಮನ್ವಯ ಸಾಗಿದರೆ ಗುರಿ ಸಾಧನೆ ಗ್ಯಾರಂಟಿ ಎಂದು ಉಸ್ತುವಾರಿ ಕೇಶವ ಪ್ರಸಾದ್​ ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಕರಪತ್ರಗಳು ಸಿದ್ಧವಾಗಿವೆ. ಅದನ್ನು ಪ್ರತಿ ಮನೆಗೂ ತಲುಪಿಸಿ ಜಾಗೃತಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ಎದುರಾಳಿಗಳಿಗೆ ಬಿಸಿ ಮುಟ್ಟಿಸಬೇಕು
ಮಾಜಿ ಶಾಸಕ ಕೆ.ಎಚ್​.ಮಂಜುನಾಥ್​ ಗೌಡ ಮಾತನಾಡಿ, ಎದುರಾಳಿ ಪಕ್ಷದವರು ನಮ್ಮ ಮೇಲೆ ಕಣ್ಣಿಟ್ಟಿರುತ್ತಾರೆ. ಸಂಟನೆಯ ಶಕ್ತಿ ಏನು ಎಂಬುದರ ಬಗ್ಗೆ ಬಿಸಿ ಮುಟ್ಟಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೆಲವರ ಅಪಸ್ವರ
ಕೋಲಾರ ಮೀಸಲು ಲೋಕಸಭೆ ಕ್ಷೇತ್ರದ ಚುನಾವಣೆ ಜವಾಬ್ದಾರಿ ಕುರಿತು ಜೆಡಿಎಸ್​ ಮುಖಂಡರಿಗೆ ಮಾತ್ರ ವಹಿಸಲಾಗಿದೆ. ಬಿಜೆಪಿ ಮುಖಂಡರನ್ನು ಸರಿಯಾಗಿ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಮುಖಂಡರ ಚರ್ಚೆಯ ವೇಳೆ ಕೆಲ ಮುಖಂಡರು ಅಪಸ್ವರ ವ್ಯಕ್ತಪಡಿಸಿದ್ದಾರೆ. ಆಗ ಎರಡೂ ಪಕ್ಷಗಳ ಹಿರಿಯ ಮುಖಂಡರು ಮಧ್ಯ ಪ್ರವೇಶಿಸಿ ಚುನಾವಣೆ ಜವಾಬ್ದಾರಿ ಪ್ರತಿಯೊಬ್ಬರಿಗೆ ವಹಿಸಲಾಗಿದೆ. ಯಾರನ್ನೂ ಕಡೆಗಣಿಸಿಲ್ಲ ಎಂದು ಸಮಾಧಾನಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net