ಕಾಮಗಾರಿ ವಿಳಂಬಕ್ಕೆ ಶಾಸಕರ ವೈಲ್ಯ ಕಾರಣ

23 cpt elekeri bridge visit cpy 2
Published on

ಚನ್ನಪಟ್ಟಣ: ನಗರದ ಎಲೇಕೇರಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸ್ಥಳೀಯ ಶಾಸಕರ ವೈಫಲ್ಯವೇ ಕಾರಣ. ಈ ಕಾಮಗಾರಿ ಬಗ್ಗೆ ಶಾಸಕರು ಗಮನಹರಿಸದ ಪರಿಣಾಮ ಜನತೆ ಸಮಸ್ಯೆ ಅನುಭವಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಆರೋಪಿಸಿದರು. ನಗರದ ಎಲೆಕೇರಿ ಬಳಿ ಸೋಮವಾರ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ರೈಲ್ವೆ ಮೇಲ್ಸುತುವೆ ಹಲವು ಗ್ರಾಮಗಳಿಗೆ ಅಗತ್ಯವಾಗಿದೆ. ಆದರೆ, ಕ್ಷೇತ್ರದ ಶಾಸಕರು ಈ ಕಾಮಗಾರಿ ಬಗ್ಗೆ ಎಂದೂ ತಲೆಕೆಡಿಸಿಕೊಂಡಂತಿಲ್ಲ. ಈ ಭಾಗದ ಜನತೆಯ ಮನವಿ ಮೇರೆಗೆ ಕಾಮಗಾರಿಗೆ ಸಂಬಂಧಪಟ್ಡವರೊಂದಿಗೆ ಮಾತನಾಡಿದ್ದು, ಇನ್ನು 15 ದಿನಗಳಲ್ಲಿ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಕಾಮಗಾರಿ ಅನುಷ್ಠಾನಕ್ಕೆ ನಾಲ್ಕು ಇಲಾಖೆಗಳ ನಡುವಿನ ಸಮನ್ವಯ ಅಗತ್ಯವಿದೆ. ಎಲ್ಲ ಇಲಾಖೆಗಳ ಜತೆ ಅಗತ್ಯ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡಿದ್ದರೆ ಇಷ್ಟೊತ್ತಿಗೆ ಕಾಮಗಾರಿ ಪೂರ್ಣಗೊಳ್ಳುತಿತ್ತು. ಸಮಸ್ಯೆ ಬಗೆಹರಿಸಿದ್ದರೆ ಈಗಾಗಲೇ ರೈಲ್ವೆ ಇಲಾಖೆಯವರು ಕಾಮಗಾರಿ ಆರಂಭ ಮಾಡುತ್ತಿದ್ದರು. ಈ ಬಗ್ಗೆ ಒಂದೇ ಒಂದು ಸಭೆ ನಡೆಸಿಲ್ಲ. ಕಾಮಗಾರಿ ವಿರುದ್ದ ಕೆಲ ಸ್ಲಂ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಅವರ ಮನವೊಲಿಸುವ ಕೆಲಸ ಮಾಡುವುದು ಕಷ್ಟ ಇರಲಿಲ್ಲ. ಹೀಗಾಗಿ ಈ ಕಾಮಗಾರಿ ನನೆಗುದಿಗೆ ಬೀಳಲು ಶಾಸಕರ ನಡೆ ಪ್ರಮುಖ ಕಾರಣ ಎಂದರು.

ನ್ಯಾಯಾಲಯದಲ್ಲಿ ದಾವೆ ಹೂಡಿರುವವರ ಜತೆ ಮಾತುಕತೆ ನಡೆಸಿದ್ದು, ದಾವೆಯನ್ನು ಹಿಂಪಡೆಯುವುದಾಗಿ ಒಪ್ಪಿಕೊಂಡಿದ್ದಾರೆ. ನಗರಸಭೆ ಕೂಡ ಸೂಕ್ತ ಪರಿಹಾರ ನೀಡಲು ಒಪ್ಪಿಕೊಂಡಿದೆ. ಸಮಸ್ಯೆ ಬಗೆಹರಿದಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಈ ಭಾಗದ ಜನತೆ ಒತ್ತಡ ಹೇರಿದ್ದರಿಂದ ಈ ಕಾಮಗಾರಿ ಬಗ್ಗೆ ಗಮನಹರಿಸಿದ್ದೇನೆ. ಆದರೆ, ಸಮಸ್ಯೆ ಬಗೆಹರಿಸಲು ಮುಂದಾದರೆ ಸ್ಥಳೀಯ ಶಾಸಕರು ಅಡ್ಡಿಪಡಿಸುತ್ತಾರೆ. ಅವರೂ ಕೆಲಸ ಮಾಡೋಲ್ಲ, ನನಗೂ ಕೆಲಸ ಮಾಡಲು ಬಿಡುವುದಿಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಸಿಪಿವೈ ಆಕ್ರೋಶ ವ್ಯಕ್ತಪಡಿಸಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಂಪುರ ಮಲವೇಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಲೇಕೇರಿ ರವೀಶ್, ಶಿವಲಿಂಗಯ್ಯ(ಕುಳ್ಳಪ್ಪ) ಮುಂತಾದವರು ಇದ್ದರು.

ಸ್ಲಂ ಬೋರ್ಡ್ ಅಧಿಕಾರಿಗಳ ಜತೆ ಚರ್ಚೆ: ಸ್ಥಳದಲ್ಲೇ ಸ್ಲಂ ಬೋರ್ಡ್ ಅಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ ಯೋಗೇಶ್ವರ್, ಅಗತ್ಯವಿರುವ ನಿರಾಪೇಕ್ಷಣ ಪತ್ರವನ್ನು ತುರ್ತಾಗಿ ನೀಡುವಂತೆ ಸೂಚಿಸಿದರು. ಸ್ಥಳದಲ್ಲಿದ್ದ ರೈಲ್ವೆ ಇಲಾಖೆ ಕಾಮಗಾರಿ ವಿಭಾಗದ ಇಂಜಿನಿಯರ್ ಜತೆ ಚರ್ಚಿಸಿದ ಯೋಗೇಶ್ವರ್, ಕಾಮಗಾರಿಯನ್ನು ಆರಂಭಿಸಲು ನೀವು ಸಿದ್ದವಿದ್ದೀರಾ, ನಿಮ್ಮ ಗುತ್ತಿಗೆದಾರರಿಗೆ ಹೇಳಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು.

ತುರ್ತು ಸಭೆ ಕರೆದು ಅನುಮೋದನೆ ಪಡೆಯಿರಿ" ನಗರದ ಎಲೆಕೇರಿ ರೈಲ್ವೆ ಮೇಲ್ಸೇತುವೆ ಬಳಿ ಸೋಮವಾರ ಆಗಮಿಸಿದ ಸಿ.ಪಿ. ಯೋಗೇಶ್ವರ್, ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ಪರಿಶೀಲಿಸಿದರು. ಮೇಲ್ಸೇತುವೆ ಕಾಮಗಾರಿ ಆರಂಭಿಸಲು ಅಡ್ಡಿಯಾಗಿರುವ ಸಾರ್ವಜನಿಕ ಕಾಲೇಜಿನ ಹಿಂಭಾಗದ ಕೊಳೆಗೇರಿ ನಿವಾಸಿಗಳ ಪೈಕಿ 6 ಮನೆಗಳ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಪರಿಹಾರದ ಚೆಕ್ ಬಂದರೆ ಜಾಗ ಬಿಟ್ಟುಕೊಡುವುದಾಗಿ ಈ ವೇಳೆ ಸ್ಲಂ ನಿವಾಸಿಗಳು ಯೋಗೇಶ್ವರ್ ಅವರಿಗೆ ತಿಳಿಸಿದರು.

ಸ್ಲಂ ಬೋರ್ಡ್‌ನಿಂದ ನಿರಾಪೇಕ್ಷಣ ಪತ್ರ(ಎನ್‌ಒಸಿ) ಇನ್ನೂ ಸಿಕ್ಕಿಲ್ಲ, ಅವರು ನೀಡುತ್ತಿದ್ದಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ಹಣ ನೀಡುವುದಾಗಿ ಸ್ಥಳದಲ್ಲಿದ್ದ ಪೌರಾಯುಕ್ತ ಸಿ.ಪುಟ್ಟಸ್ವಾಮಿಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯೋಗೇಶ್ವರ್ ಮತ್ತೆ ಸಾಮಾನ್ಯ ಸಭೆಯ ಅನುಮೋದನೆ ಅಗತ್ಯವೇನು, ಈಗಾಗಲೇ ಈ ವಿಚಾರಕ್ಕೆ ನಗರಸಭೆ ಅನುಮೋದನೆ ನೀಡಿದೆ ಎಂದರು. ಎನ್‌ಒಸಿ ಬಂದ ಬಳಿಕ ಮತ್ತೆ ಸಭೆಯ ಅನುಮೋದನೆ ಪಡೆಯಬೇಕು ಎಂದು ಪೌರಾಯುಕ್ತರು ಸಮಜಾಯಿಷಿ ನೀಡಿದ ಹಿನ್ನೆಲೆಯಲ್ಲಿ, ಅನಗತ್ಯ ವಿಳಂಬ ಮಾಡದೆ ತುರ್ತು ಸಭೆ ಕರೆದು ಅನುಮೋದನೆ ಪಡೆದು ಕೊಂಡು ಪರಿಹಾರದ ಚೆಕ್ ವಿತರಿಸಿ ಎಂದು ಪೌರಾಯುಕ್ತರಿಗೆ ತಾಕೀತು ಮಾಡಿದರು.

ಮಾಜಿ ಸಿಎಂಗೆಕಾಳಜಿ ಇಲ್ಲ: ರೈಲ್ವೇ ಗೇಟ್ ಬಂದ್ ಮಾಡಿದಾಗ ಉಂಟಾಗುವ ಸಮಸ್ಯೆ ಈ ಭಾಗದ ಜನರಿಗೆ ಮಾತ್ರ ಗೊತ್ತಿದೆ.ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾರಣದಿಂದ ಉಂಟಾಗಿದ್ದ ಅಡಚಣೆಗಳನ್ನು ಪರಿಹರಿಸಲು ಕ್ರಮ ಕೈಗೊಂಡಿದ್ದೇನೆ ಎಂದರು. ಕುಮಾರಸ್ವಾಮಿ ಅವರಿಗೆ ಕ್ಷೇತ್ರದ ಬಗ್ಗೆ ಕಾಳಜಿ ಇದಿದ್ದರೆ ರೈಲ್ವೆ ಸೇತುವೆ ಹಾಗೂ ಖಾಸಗಿ ಬಸ್ ನಿಲ್ದಾಣದ ಸಮಸ್ಯೆ ಬಗೆಹರಿಸಬಹುದಿತ್ತು. ಬಸ್ ನಿಲ್ದಾಣ ಕಾಮಗಾರಿಯಲ್ಲಿ ಅವರದೇ ಪಕ್ಷದ ನಾಯಕ ವಿವಾದ ಸೃಷ್ಟಿಸಿದ್ದಾನೆ. ಕಾಮಗಾರಿ ಬಗ್ಗೆ ಕಾಳಜಿ ಇದಿದ್ದರೆ ಅವರು ಆ ಬಗ್ಗೆ ಮಾತುಕತೆ ಮಾಡಬಹುದಿತ್ತು ಎಂದು ಸಿಪಿವೈ ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net