

ಬೆಂಗಳೂರು: ನಾನು ಇಂದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಸಂಜೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಈಗಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕಳುಹಿಸಿ ಕೊಟ್ಟಿದ್ದೇನೆ ಎಂದು ಬೆಳಗಾವಿಯ ಪ್ರಭಾವಿ ನಾಯಕ ಲಕ್ಷ್ಮಣ್ ಸವದಿ ಹೇಳಿದರು.
ಕಾಂಗ್ರೆಸ್ ನಾಯಕರ ಜತೆ ಚರ್ಎ ನಡೆಸಿದ ಬಳಿಕ ಪ್ಯಾಲೇಸ್ ಗುಟ್ಟಹಳ್ಳಿ ಬಳಿ ಸುದ್ದಿಗಾರರೊಂದಿಗೆ ಲಕ್ಷ್ಮಣ್ ಸವದಿ ಮಾತನಾಡಿದರು.
ಯಾರೂ ನನ್ನ ಸಂಪರ್ಕ ಮಾಡಿಲ್ಲ
ಸಂಜೆ ಎಂಎಲ್ಸಿ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಇದಾದ ಕೂಡಲೇ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ. ಈಗಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕಳುಹಿಸಿ ಕೊಟ್ಟಿದ್ದೀನಿ. ಯಡಿಯೂರಪ್ಪ ಆಗಲಿ ಯಾರೂ ನನ್ನ ಸಂಪರ್ಕ ಮಾಡಿಲ್ಲ ಎಂದು ಹೇಳಿದರು.
ಬಿಜೆಪಿ ವಿರುದ್ಧ ಆಕ್ರೋಶ
ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮುಖ್ಯಮಂತ್ರಿ ಅವರು ಬೇಸರ ವ್ಯಕ್ತಪಡಿಸಿದ್ರೆ ನಾನು ಹೋಗಿ ಒಂದು ಸಾಂತ್ವನ ಹೇಳ್ತೇನೆ ಎಂದು ಸವದಿ ವ್ಯಂಗ್ಯವಾಡಿದರು. ನಾನು ಇವರನ್ನು ಡಿಸಿಎಂ ಮಾಡಿ ಅಂತ ಕೇಳಿರಲಿಲ್ಲ. ಆದರೆ ಮಾಡಿದರು. ಬಳಿಕ ಮತ್ತೆ ತೆಗೆದರು. ಯಾಕೆ ತೆಗೆದರು? ಯಾರನ್ನು ಕೇಳಿ ಕೊಟ್ಟರು? ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬೇಡಿಕೆ ಇಟ್ಟಿದ್ದೀನಿ
ಕಾಂಗ್ರೆಸ್ ಬಳಿ ಪುತ್ರನಿಗೆ ಟಿಕೆಟ್ ಕೇಳಿಲ್ಲ ಮತ್ತು ನನಗೆ ಪುತ್ರನ ವ್ಯಾಮೋಹವೂ ಇಲ್ಲ. ಒಂದಷ್ಡು ನೀರಾವರಿ ಯೋಜನೆಗಳ ಸಂಬಂಧ ಕಾಂಗ್ರೆಸ್ಸ್ ಬಳಿ ಬೇಡಿಕೆ ಇಟ್ಟಿದ್ದೀನಿ. ಅದಕ್ಕೆ ಒಪ್ಪಿದ್ದಾರೆ. ಅದನ್ನು ಬಿಟ್ಟು ಬೇರೆ ಇಲ್ಲ. ರಾಜ್ಯಾದ್ಯಂತ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದೇನೆ. ಈ ಬಾರಿ ಚುನಾವಣೆಗೆ ಬಿಜೆಪಿಯಿಂದ ನನಗೆ ಟಿಕೆಟ್ ಅಂತ ಹೇಳಲಾಗಿತ್ತು. ಆದರೆ, ಈಗ ಟಿಕೆಟ್ ಕೊಟ್ಟಿಲ್ಲ ಎಂದರು ಅಸಮಾಧಾನ ಹೊರ ಹಾಕಿದರು.
ಸೀಮಿತ ಮಾಡಬೇಡಿ
ಕಾಂಗ್ರೆಸ್ ಸರ್ಕಾರ ಬಂದರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಡಬೇಕು ಅಂತ ಕೇಳಿದ್ದೇನೆ. ನೀರಾವರಿ ಯೋಜನೆಗಳು ಆಗಬೇಕಿದೆ. ಬೇರೆ ಯಾವ ಡಿಮ್ಯಾಂಡನ್ನು ನಾವು ಇಟ್ಟಿಲ್ಲ. ಸತೀಶ್ ಜಾರಕಿಹೊಳಿ ಜತೆ ನಾನಿನ್ನೂ ಮಾತಾಡಿಲ್ಲ. ಮುಂದೆ ಮಾತಾಡುತ್ತೇನೆ. ನಾನು ಜಾತ್ಯಾತೀತ ನಾಯಕ ಒಂದು ಜಾತಿಗೆ ಸೀಮಿತ ಮಾಡಬೇಡಿ. ನನಗೆ ಎಲ್ಲರೂ ಒಂದೇ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)