

ಶಿವಮೊಗ್ಗ: ರಾಜ್ಯ ವಕೀಲರ ಪರಿಷತ್ ಸದಸ್ಯ ಸದಾಶಿವ ರೆಡ್ಡಿ ಅವರ ಮೇಲೆ ನಡೆದ ಮಾರಾಣಾಂತಿಕ ಹಲ್ಲೆ ಖಂಡಿಸಿ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಸೋಮವಾರ ಕೆಂಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಏ.16ರಂದು ಸದಾಶಿವ ರೆಡ್ಡಿ ಅವರ ಮೇಲೆ ಹಲ್ಲೆ ಮಾಡಿದ ಎಲ್ಲ ಆರೋಪಿಗಳನ್ನು ಶೀಘ್ರ ಬಂಧಿಸಬೇಕು. ಕೇಸ್ ಕೊಡುವ ನೆಪದಲ್ಲಿ ಅವರ ಕಚೇರಿಗೆ ಬಂದ ಇಬ್ಬರ ಪೈಕಿ ಒಬ್ಬ ಫೈಬರ್ ಪೈಪ್‌ನಿಂದ ಹೊಡೆದು ಗಾಯಗೊಳಿಸಿದ್ದಾನೆ. ಮತ್ತೊಬ್ಬ ಹಲ್ಲೆ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ದಾಳಿ ನಡೆಸಿದ್ದಲ್ಲದೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಮಾತನಾಡಿ, ಘಟನೆಗೆ ಸಂಬಂಧಿಸಿ ರಾಜ್ಯಾದ್ಯಂತ ವಕೀಲರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತೆಯೇ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದಿಂದಲೂ ಹಲ್ಲೆಯ ಘಟನೆ ಖಂಡಿಸಿ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ವಕೀಲರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಪದಾಧಿಕಾರಿಗಳಾದ ಎಂ.ಜಗದೀಶ್, ಕಿಲಕ ಕುಮಾರಿ, ಎಂ.ಎಸ್.ಎ.ಶ್ರೀನಿವಾಸ್, ಎಂ.ಬಿ.ಮಾಲತೇಶ್ ಇತರರಿದ್ದರು.