ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ತನಿಖೆಗೆ ಸಿಸಿಬಿ ವರ್ಗಾವಣೆ

CCB
Published on

ಬೆಂಗಳೂರು: ಭೋವಿ ಅಭಿವೃದ್ಧಿ ನಿಗಮದಲ್ಲಿನ ಹಗರಣದ ಕುರಿತು ಸಿಐಡಿ ವಿಚಾರಣೆ ಎದುರಿಸಿದ್ದ ವಕೀಲೆ ಹಾಗೂ ಉದ್ಯಮಿ ಎಸ್.ಜೀವಾ (೩೩) ಆತ್ಮಹತ್ಯೆ ಪ್ರಕರಣದ ತನಿಖೆಯ ಹೊಣೆಯನ್ನು ಕೇಂದ್ರ ಅಪರಾಧ ವಿಭಾಗಕ್ಕೆ (ಸಿಸಿಬಿ) ವರ್ಗಾಹಿಸಲಾಗಿದೆ.

ಜೀವಾ ಆತ್ಮಹತ್ಯೆಯ ಕುರಿತು ಅವರ ಸಹೋದರಿ ಸಂಗೀತಾ ನೀಡಿದ್ದ ದೂರಿನನ್ವಯ ಸಿಐಡಿ ಡಿವೈಎಸ್‌ಪಿ ಕನಕಲಕ್ಷ್ಮಿ ವಿರುದ್ಧ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದ ಮುಂದಿನ ತನಿಖೆಯನ್ನು ಸಿಸಿಬಿಗೆ ವರ್ಗಾಹಿಸಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶಿಸಿದ್ದಾರೆ.

ಭೋವಿ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ವುಡ್ ಮೆಟಿರಿಯಲ್ಸ್ ಪೂರೈಸುತ್ತಿದ್ದ ಜೀವಾ ಅವರು ನ. ೨೨ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಬನಶಂಕರಿ ಠಾಣೆ ವ್ಯಾಪ್ತಿಯ ರಾಘವೇಂದ್ರ ಲೇಔಟ್‌ನಲ್ಲಿರುವ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಜೀವಾ ಆತ್ಮಹತ್ಯೆಗೆ ಶರಣಾಗಿದ್ದರು. ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ಜೀವಾಗೆ ಸಿಐಡಿಯ ಡಿವೈಎಸ್‌ಪಿ ಕನಕಲಕ್ಷ್ಮಿ ಮಾನಸಿಕ ಕಿರುಕುಳ ನೀಡಿದಲ್ಲದೇ ವಿವಸಗೊಳಿಸಿ ಹಾಗೂ ೨೫ ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಮೃತಳ ಸಹೋದರಿ ಸಂಗೀತಾ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದರು.

ಜೀವಾ ಬರೆದಿಟ್ಟಿದ್ದ ಡೆತ್‌ನೋಟ್ ಹಾಗೂ ಮೃತಳ ಸಹೋದರಿ ನೀಡಿದ್ದ ದೂರನ್ನ ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಬನಶಂಕರಿ ಠಾಣೆ ಪೊಲೀಸರು ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡಿದ್ದರು. ಮತ್ತೊಂದೆಡೆ ಜೀವಾ ಆತ್ಮಹತ್ಯೆಯ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ವಕೀಲರ ಸಂಘ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಈ ಪ್ರಕರಣ ಗಂಭೀರತೆ ಪಡೆಯುತ್ತಿದ್ದಂತೆ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತನಿಖೆಯನ್ನ ಸಿಸಿಬಿಗೆ ವರ್ಗಾಹಿಸಿದ್ದಾರೆ.

ತನಿಖೆ ಆರಂಭಿಸಿದ ಸಿಸಿಬಿ:

ಸಿಸಿಬಿಯ ಎಸಿಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದ್ದು, ಪ್ರಕರಣದ ಪ್ರಾಥಮಿಕ ತನಿಖೆಯ ದಾಖಲೆಗಳನ್ನು ಈಗಾಗಲೇ ಬನಶಂಕರಿ ಠಾಣೆ ಪೊಲೀಸರು ಸಿಸಿಬಿಗೆ ಹಸ್ತಾಂತರಿಸಲಾಗಿದ್ದು, ಕಡತಗಳನ್ನು ಪಡೆದುಕೊಂಡಿರುವ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಹಣ ವರ್ಗಾವಣೆ ಆಗಿತ್ತು ಎಂಬ ಆರೋಪ:

ಭೋವಿ ಅಭಿವೃದ್ಧಿ ನಿಗಮದ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಜೀವಾ ಬ್ಯಾಂಕ್ ಖಾತೆಗೆ ಭೋವಿ ನಿಗಮದ ಸಾಕಷ್ಟು ಹಣ ವರ್ಗಾವಣೆಯಾಗಿದೆ ಎಂಬ ಆರೋಪದಡಿ ಅವರನ್ನು ವಿಚಾರಣೆಗೊಳಪಡಿಸಿದ್ದರು. ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದ ಜೀವಾ, ೧೩ ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಅಂಶಗಳು ಹಾಗೂ ಜೀವಾ ಸಹೋದರಿ ನೀಡಿರುವ ದೂರಿನನ್ವಯ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಿಐಡಿ ಅಧಿಕಾರಿಗೆ ಸಿಸಿಬಿ ಡ್ರಿಲ್?

ಸಾಮಾನ್ಯವಾಗಿ ಸೂಕ್ಷ್ಮ ಅಥವಾ ಗಂಭೀರವಾದ ಪ್ರಕರಣಗಳನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ವರ್ಗಾಹಿಸುತ್ತದೆ. ಸಿಐಡಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಸಮಗ್ರವಾದ ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಚ್‌ಶೀಟ್ ಸಲ್ಲಿಸುತ್ತಾರೆ. ಆದರೀಗ ಪ್ರತಿಷ್ಠಿತ ತನಿಖಾ ಸಂಸ್ಥೆಯಾದ ಸಿಐಡಿಯ ಡಿವೈಎಸ್‌ಪಿ ಕನಕಲಕ್ಷ್ಮಿ ವಿರುದ್ಧವೇ ಗಂಭೀರವಾದ ಆರೋಪ ಕೇಳಿ ಬಂದಿದ್ದು ಸಿಐಡಿ ಡಿವೈಎಸ್‌ಪಿಯ ವಿರುದ್ಧ ಸಿಸಿಬಿ ಅಧಿಕಾರಿಗಳು ಯಾವ ರೀತಿ ತನಿಖೆ ನಡೆಸುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಸಿಸಿಬಿ ಅಧಿಕಾರಿಗಳು ಸಿಐಡಿ ಅಧಿಕಾರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net