

ಸೋಮವಾರಪೇಟೆ : ಯಡೂರು ಗ್ರಾಮದಲ್ಲಿರುವ ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿಗಳು ಚುನಾವಣಾ ಸುಧಾರಣೆಗಳ ಬಗ್ಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿ, ಮತದಾರದಿಂದಲೂ ಅಭಿಪ್ರಾಯ ಪಡೆದುಕೊಂಡರು.
ವಿದ್ಯಾರ್ಥಿಗಳಾದ ಹಂಸಿನಿ, ಶ್ರೇಯಾ, ವೇದಕುಮಾರ್, ಜೀವನ್ ಅವರುಗಳು ಕರ್ಕಳ್ಳಿ ಕುಂದಳ್ಳಿ, ಯಡೂರು, ತಾಕೇರಿ ಗ್ರಾಮದಲ್ಲಿ ಮತದಾರ ಮನೆಗೆ ಭೇಟಿ ನೀಡಿ ಸಂವಾದ ನಡೆಸಿದರು. ಚುನಾವಣೆಯ ಸಂದರ್ಭ ದೊಡ್ಡಮಟ್ಟದ ಭ್ರಷ್ಟಾಚಾರ, ಹೆಂಡ, ಹಣ ಹಂಚುವುದು, ಕೋಟಿಗಟ್ಟಲೆ ಹಣ ಖರ್ಚು ಮಾಡಿ ಚುನಾವಣೆಯನ್ನು ಗೆಲ್ಲುವುದು ಮಾಮೂಲಿಯಾಗಿದೆ. ಭ್ರಷ್ಟಾಚಾರವನ್ನು ಸಂಪೂರ್ಣ ತಡೆಗಟ್ಟಲು ದೊಡ್ಡಮಟ್ಟದ ಸುಧಾರಣ ಕಾನೂನುಗಳನ್ನು ತರಬೇಕೆಂದು ಬಹುತೇಕ ಮತದಾರರು ತಿಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದರು.
ಶುಕ್ರವಾರ ಸೋಮವಾರಪೇಟೆ ತಾಲೂಕು ಕಚೇರಿಯ ಚುನಾವಣಾ ಶಾಖೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಶಿರಸ್ತೇದಾರ್ ವಿ.ಎನ್.ಲೋಹಿತ್ ಅವರಿಗೆ ಮತಪತ್ರ ಮತ್ತು ಮತಯಂತ್ರದ ಬಗ್ಗೆ ಮಾಹಿತಿ ಪಡೆದುಕೊಂಡರು. ವಿವಿ ಪ್ಯಾಟ್ ವಿನ್ಯಾಸ ಮತ್ತು ನಿರ್ವಹಣೆಯ ಬಗ್ಗೆ, ಕಡ್ಡಾಯ ಮತದಾನ, ವೋಟರ್ ಹೆಲ್ಪ್‌ಲೈನ್ ಆ್ಯಪ್ ಬಗ್ಗೆ ಮಾಹಿತಿ ಪಡೆದುಕೊಂಡರು. 18 ವರ್ಷ ತುಂಬಿದ ತಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಂಡು ಕಡ್ಡಾಯ ಮತದಾನ ಮಾಡಬೇಕು ಈ ಬಗ್ಗೆ ಕಾಲೇಜಿನಲ್ಲೂ ಜಾಗೃತಿ ಮೂಡಬೇಕು ಎಂದು ಲೋಹಿತ್ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.