

ವಿಜಯಪುರ: ರಾಜ್ಯದಲ್ಲಿ ಮೈಕ್ರೋಫೈನಾನ್ಸ್‌ಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಕರ್ನಾಟಕ ಕಿರುಸಾಲ ಮತ್ತು ಸಣ್ಣ ಸಾಲ (ಒತ್ತಡ ತಂತ್ರಗಳ ನಿಷೇಧ) ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಪ್ಪುಗ್ರಹಿಕೆಯಿಂದಾಗಿ ವಾಪಸ್ ಕಳುಹಿಸಿದ್ದು, ಕೂಡಲೇ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕೆಲವು ಸ್ಪಷ್ಟನೆ ಮತ್ತು ಪ್ರತಿಕ್ರಿಯೆಗಳೊಂದಿಗೆ ವಾಪಸ್ ಸಲ್ಲಿಸಲಾಗುವುದೆಂದು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ರಾಜ್ಯದಲ್ಲಿ ಅನಧಿಕೃತ ಮೈಕ್ರೋಫೈನಾನ್ಸ್‌ಗಳ ಹಾವಳಿಯಿಂದಾಗಿ ಅನೇಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆತ್ಮಸ್ಥೈರ್ಯ ಕಳೆದುಕೊಂಡ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಅನಧಿಕೃತ ಮೈಕ್ರೋಫೈನಾನ್ಸ್‌ಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ಸುಗ್ರೀವಾಜ್ಞೆ ಮೂಲಕ ನೂತನ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಆದರೆ, ರಾಜ್ಯಪಾಲರು ಕೆಲವು ಅಂಶಗಳನ್ನು ವ್ಯಕ್ತಪಡಿಸಿ ವಾಪಸ್ ಕಳುಹಿಸಿದ್ದು, ಈ ಕುರಿತು ಮನವರಿಕೆ ಮಾಡಿಕೊಡಲಾಗುವುದೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನೊಂದಾಯಿತವಲ್ಲದ ಮತ್ತು ಸಾಲ ನೀಡಲು ಲೈಸೆನ್ಸ್ ಹೊಂದಿರದ ಯಾವುದೇ ವ್ಯಕ್ತಿಯು ಯಾರಿಗೇ ಆಗಲಿ ಹೆಚ್ಚಿನ ಬಡ್ಡಿ ಮತ್ತು ಚಕ್ರಬಡ್ಡಿ ಅಥವಾ ದಂಡದ ಬಡ್ಡಿ ವಿಧಿಸಲು ಕಾನೂನಾತ್ಮಕವಾಗಿ ಅಧಿಕಾರ ಹೊಂದಿಲ್ಲ. ಸಾಲವನ್ನು ಖಾಸಗಿಯಾಗಿ, ಲೈಸೆನ್ಸ್ ಇಲ್ಲದೇ ನೀಡಿದರೆ ಅದಕ್ಕೆ ಹೆಚ್ಚಿನ ಬಡ್ಡಿ ವಸೂಲಿ ಮಾಡಿದರೆ ಅದು ಕಾನೂನು ವಿರೋಧಿ ಕ್ರಮವಾಗಿದೆ. ಅಂತಹ ಸಾಲವು ವಸೂಲಿಗೆ ಅರ್ಹವು ಅಲ್ಲ ಯೋಗ್ಯವು ಅಲ್ಲ.
ಕಾನೂನಾತ್ಮಕ ಪ್ರಕ್ರಿಯೆ ಕೈಗೊಂಡು ಕಾನೂನಿನ ಪ್ರಕಾರ ವಿಧಿಸಿದ ಬಡ್ಡಿ ಮೇರೆಗೆ ನೀಡಿದ ಸಾಲ ಮಾತ್ರ ವಸೂಲಿಗೆ ಅರ್ಹವೆ ಹೊರತು ಬೇರೆ ಯಾವುದೇ ಅಕ್ರಮ ಸಾಲದ ಮತ್ತು ಬಡ್ಡಿ ವಿಧಿಸಿದ ಸಾಲ ವಸೂಲಾತಿ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲು ಕಾನೂನಾತ್ಮಕವಾಗಿ ನ್ಯಾಯಾಲಯಗಳು ಕೂಡಾ ವಿಚಾರಣೆಗೆ ಒಳಪಡಿಸಲು ಸಾಧ್ಯವೇ ಇಲ್ಲ. ಇಂತಹ ಸಾಲವನ್ನು ವಸೂಲಿ ಮಾಡಲು ಮತ್ತು ವಿಧಿಸಿದ ಬಡ್ಡಿಯನ್ನು ಕಾನೂನಾತ್ಮಕವಾಗಿ ಕೂಡ ಲೈಸೆನ್ಸ್ ಇಲ್ಲದೇ ಮತ್ತು ನೊಂದಾಯಿತವಲ್ಲದ ಸಾಲ ನೀಡುವುದು ಮತ್ತು ಸಾಲವನ್ನು ವಸೂಲಿ ಮಾಡುವುದು ಸಂವಿಧಾನಾತ್ಮಕವಾಗಿ ಕೊಡಮಾಡಿದ ಮೂಲಭೂತ ಹಕ್ಕು ಎಂದು ಪರಿಗಣಿಸುವುದಾದರೆ ಸಂವಿಧಾನದ ಬಹುದೊಡ್ಡ ರಕ್ಷಣೆ. ಸಮಾಜದಲ್ಲಿ ಅಕ್ರಮವಾಗಿ ಬಡ್ಡಿ ವಿಧಿಸಿ ಕಾನೂನು ಬಾಹಿರವಾಗಿ ಸಾಲ ವಸೂಲಿ ಮಾಡುವ ವ್ಯಕ್ತಿಗಳಿಗೆ ಲಭ್ಯವಾಗುತ್ತದೆ. ಇದು ಸಂವಿಧಾನ ಮತ್ತು ಕಾನೂನು ವಿರೋಧಿಯಾದ ಮತ್ತು ಸಮಾಜಕ್ಕೆ ಕಂಟಕ ತರುವಂತಹ ಸಂವಿಧಾನ ವಿರೋಧಿ ಕ್ರಮವೇ ಹೊರತು ಸಂವಿಧಾನಾತ್ಮಕವಾಗುವುದಿಲ್ಲ ಎಂದರು.
ಮುಂದುವರಿದು ಕಾನೂನಾತ್ಮಕವಾಗಿ ನೋಂದಾಯಿತ ಸಂಸ್ಥೆ ಅಥವಾ ವ್ಯಕ್ತಿಗಳು ನಿಯಮಾನುಸಾರ ನೈಜ ಸಾಲ ನೀಡಿದವರು ವಸೂಲಿ ಮಾಡಬಾರದೆಂದು ಅಥವಾ ಅಂತಹ ಸಾಲಗಳು ವಸೂಲಿಗೆ ಅರ್ಹವಲ್ಲವೆಂದು ರಾಜ್ಯಪಾಲರಿಗೆ ಸಲ್ಲಿಸಿರುವ ಸುಗ್ರಿವಾಜ್ಞೆಯಲ್ಲಿ ಎಲ್ಲಿಯೂ ಹೇಳಿಲ್ಲ. ಕೇವಲ ಸಾಲ ವಸೂಲಾತಿಗೆ ಕಾನೂನು ಬಾಹಿರ ಕ್ರಮಗಳನ್ನು ಕೈಗೊಳ್ಳುವುದು, ಹಿಂಸೆ ಮಾಡುವುದು ಮತ್ತು ಒತ್ತಡ ತಂತ್ರ ಹೇರುವುದು ಹಾಗೂ ಕಿರುಕುಳಕ್ಕೆ ಕಾರಣವಾಗುವುದನ್ನು ತಡೆಯಲು ಸುಗ್ರಿವಾಜ್ಞೆ ಪ್ರಸ್ತಾಪಿಸುತ್ತದೆ. ನೈಸರ್ಗಿಕ ನ್ಯಾಯ ಮತ್ತು ಯಾವುದೇ ವ್ಯಕ್ತಿಯ ಹಕ್ಕುಗಳಿಗೆ ಮತ್ತು ಕಾನೂನಾತ್ಮಕ ಹೋರಾಟಕ್ಕೆ ಮೂಲಭೂತ ಹಕ್ಕುಗಳಿಗೆ ಧಕ್ಕೆತರುವಂತಹ ಯಾವುದೇ ಕ್ರಮ ಸುಗ್ರಿವಾಜ್ಞೆಯಲ್ಲಿ ಪ್ರಸ್ತಾಪಿಸಿಯೇ ಇಲ್ಲ ಎಂದರು.
ಸಾಲ ಕೊಟ್ಟಿರುವ ಮೊತ್ತ ಪರಿಗಣಿಸಿ ದಂಡ ಅಥವಾ ದಂಡನೆ ವಿಧಿಸಿಲ್ಲ. ಸಾಲ ವಸೂಲಾತಿ ಪ್ರಕ್ರಿಯೆ ಸಂದರ್ಭದಲ್ಲಿ ಕಿರುಕುಳ, ಒತ್ತಡ ತಂತ್ರ, ಹಿಂಸೆ, ಕಿರುಕುಳ ನೀಡುವ ಮೂಲಕ ವಸೂಲಾತಿಯ ಕ್ರಮಗಳಿಗೆ ದಂಡ ಮತ್ತು ದಂಡನೆಯನ್ನು ಪ್ರಸ್ತಾಪಿಸಲಾಗಿದೆ. ಹಾಗಾಗಿ ಯಾವುದೇ ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾದ ಕ್ರಮವನ್ನು ಸರ್ಕಾರವು ಸುಗ್ರಿವಾಜ್ಞೆಯಲ್ಲಿ ಪ್ರಸ್ತಾಪಿಸಿಲ್ಲ. ಸಾಲ ವಸೂಲಾತಿಯ ಸಂದರ್ಭದಲ್ಲಿ ಕೈಗೊಳ್ಳಬಹುದಾದ ನಿರ್ದಿಷ್ಟ ಅಪರಾಧಗಳನ್ನು ಮಾತ್ರ ಈ ಕಾನೂನಿನ ವ್ಯಾಪ್ತಿಗೆ ತರಲಾಗಿದೆ. ಬೇರೆ ಬೇರೆ ಕಾನೂನುಗಳಲ್ಲಿ ಏನೇ ಅವಕಾಶಗಳಿದ್ದರೂ ಅಕ್ರಮ ಸಾಲ ವಸೂಲಾತಿಯ ಸಂದರ್ಭದಲ್ಲಿ ಮಾಡಲಾದ ಅಪರಾಧಗಳನ್ನು ನಿರ್ದಿಷ್ಟಪಡಿಸುವುದು ಮತ್ತು ಅವುಗಳಿಗೆ ದಂಡನೆ ವಿಧಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಕಿರು ನೀಡುವ ಸಂಸ್ಥೆಗಳು ಯಾವುದೇ ಭದ್ರತೆಯನ್ನು ಪಡೆಯದೇ ಸಾಲ ನೀಡಬೇಕೆಂಬುದು ರಿಸರ್ವ್ ಬ್ಯಾಂಕ್‌ನ ನಿಯಮಗಳಲ್ಲಿ ಸ್ಪಷ್ಟವಾಗಿ ವಿಧಿಸಲಾಗಿದೆ. ಆದುದರಿಂದ ಭದ್ರತೆಯನ್ನು ಪಡೆಯದೇ ಕಿರು ಸಾಲ ನೀಡಬೇಕು ಹಾಗೂ ಒಂದು ವೇಳೆ ಅಕ್ರಮವಾಗಿ ಭದ್ರತೆ ಪಡೆದಿದ್ದರೆ ಅಂತಹ ಭದ್ರತೆಗಳನ್ನು ವಾಪಸ್ಸು ನೀಡುವುದು ಕಿರು ಸಾಲ ನೀಡುವ ಸಂಸ್ಥೆಯ ಕರ್ತವ್ಯವಾಗಿದೆ.
ಕಿರು ಸಾಲ ನೀಡುವ ವ್ಯವಸ್ಥೆಯು ಬ್ಯಾಂಕಿಂಗ್ ತಲುಪದ ದೂರದ ಪ್ರದೇಶಗಳಿಗಾಗಿ ರೂಪಿಸಲಾಗಿದೆ. ಕಿರು ಸಾಲ ನೀಡುವ ಮತ್ತು ಸಾಲ ನೀಡುವುದರ ಮೇಲೆ ಪರಿಣಾಮ ಬೀರುವ ಯಾವುದೇ ಅಡೆತಡೆಯನ್ನು ಈ ಸುಗ್ರಿವಾಜ್ಞೆ ಉಂಟು ಮಾಡುವುದಿಲ್ಲ. ಸದ್ಭಾವನೆಯನ್ನು ಉಂಟು ಮಾಡುವ ವಾತಾವರಣ ಸೃಷ್ಟಿಸಬೇಕಾದ ಜವಾಬ್ದಾರಿ ಕಿರು ಸಾಲ ನೀಡುವ ಸಂಸ್ಥೆಯ ಮೇಲೆಯೂ ಇದೆ ಎಂದರು.
ಸ್ವಸಹಾಯ ಸಂಘಗಳ ವ್ಯಾಪಾರದ ಭವಿಷ್ಯದ ಮೇಲೆ ಸುಗ್ರಿವಾಜ್ಞೆಯ ಪರಿಣಾಮ ಇರುವುದಿಲ್ಲ ಅಥವಾ ಅದು ಶೂನ್ಯವಾಗುತ್ತದೆ. ಕೇವಲ ಸಾಲ ನೀಡಿದ ಸಂಸ್ಥೆಯ ವಸೂಲಾತಿಯ ಕಾನೂನು ಬಾಹಿರ ಕ್ರಮಗಳನ್ನು ಮಾತ್ರ ದಂಡನಿಯ ಅಪರಾಧವೆಂದು ಪರಿಗಣಿಸಲಾಗಿದೆ. ನೋಂದಾಯಿತ ಸಂಸ್ಥೆಗಳ, ಬ್ಯಾಂಕ್‌ಗಳ ಮತ್ತು ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳ ಸಾಲ ನೀಡುವಿಕೆ ಮತ್ತು ವಸೂಲಾತಿ ಪ್ರಕ್ರಿಯೆ ಬಗ್ಗೆ ಸುಗ್ರಿವಾಜ್ಞೆಯಲ್ಲಿ ಉಲ್ಲೇಖಿಸಿಲ್ಲ.
ರಿಸರ್ವ್ ಬ್ಯಾಂಕ್‌ನ ನಿಬಂಧನೆಗಳು ಲಭ್ಯವಿರುವಾಗ ನೋಂದಾಯಿತ ಸಂಸ್ಥೆಗಳಿಗೆ ಈ ಸುಗ್ರಿವಾಜ್ಞೆ ವ್ಯಾಪ್ತಿಯಿಂದ ಹೊರಗಿಟ್ಟಿರುವುದು ಕಾನೂನಾತ್ಮಕ ಕ್ರಮವಾಗಿದೆ. ನಿರ್ಲಕ್ಷಿತ ವರ್ಗವನ್ನು ಹಣಕಾಸು ಅಭಿವೃದ್ಧಿಗಳಿಗೆ ಸೇರ್ಪಡೆಗೊಳಿಸಲು ಸುಗ್ರಿವಾಜ್ಞೆ ಯಾವುದೇ ರೀತಿಯ ವಿರೋಧಿ ಕ್ರಮ ಕೈಗೊಳ್ಳುವುದಿಲ್ಲ. ಸಾಲ ನೀಡಿದ ವ್ಯಕ್ತಿ ವಸೂಲಾತಿಗೆ ಕಾನೂನಿಗೆ ಗೊತ್ತಿರುವ ಮಾರ್ಗವನ್ನು ಮಾತ್ರ ಅನುಸರಿಸಬೇಕೆಂದು ನಿಬಂಧನೆ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಎಲ್ಲಾ ಕಾಯ್ದೆಗಳಲ್ಲಿ ಯಾವುದೇ ಗಂಭೀರ ಮತ್ತು ನಿಯಂತ್ರಣ ಮಾಡುವ ಪರಿಣಾಮಕಾರಿಯಾದ ಅಸ್ತ್ರ ಇಲ್ಲದೇ ಇರುವುದರಿಂದ ಸಮಾಜದ ಕೆಳಸ್ತರದ ವ್ಯಕ್ತಿಗಳಿಗೆ ಮತ್ತು ಅಬಲರಿಗೆ ಸಬಲವಾದ ಅಸ್ತ್ರವನ್ನು ಕಾನೂನಾತ್ಮಕವಾಗಿ ಒದಗಿಸಬೇಕೆಂಬ ಉದ್ದೇಶ ಸರ್ಕಾರಕ್ಕಿದೆ. ಈಗಿರುವ ಪರಿಹಾರಗಳು ಕಠಿಣಾತಿ ಕಠಿಣ ಕ್ರಮಗಳ ಬಗ್ಗೆ ಮತ್ತು ಬಾಧಿತ ಜನರ ಹಿತಾಸಕ್ತಿ ಕಾಪಾಡಲು ಪ್ರಸ್ತುತ ಕಾಯ್ದೆಗಳಲ್ಲಿ ವಿಪುಲವಾದ ಅವಕಾಶವಿಲ್ಲ. ರಿಸರ್ವ್ ಬ್ಯಾಂಕ್‌ನ ಮಾರ್ಗದರ್ಶಿಗಳು ನೋಂದಾವಣಾ ನಿಬಂಧನೆಗಳು ಕೇವಲ ನೋಂದಾಯಿತ ಸಂಸ್ಥೆಗಳಿಗೆ ಮಾತ್ರ ಇಂತಹ ನಿಬಂಧನೆಗಳು ಅನ್ವಯವಾಗುತ್ತವೆ. ಬೇರೆ ಬೇರೆ ಕಾನೂನುಗಳು ನಿರ್ಧಿಷ್ಟವಾದ ಅಪರಾಧಗಳನ್ನು ನಿರ್ಧಿಷ್ಟವಾಗಿ ದಂಡಿಸುವ ಅವಕಾಶವಿರುವುದಿಲ್ಲ ಎಂದರು.
ತುರ್ತು ಸಂದರ್ಭದಲ್ಲಿ ಸರ್ಕಾರವು ಲಭ್ಯವಿರುವ ಎಲ್ಲಾ ಸ್ಥರದಲ್ಲಿ ಸಮಾಲೋಚನೆಗಳನ್ನು ಹಲವಾರು ಸುತ್ತಿನಲ್ಲಿ ಕೈಗೊಂಡು ಈ ಸುಗ್ರಿವಾಜ್ಞೆಯ ಕರಡನ್ನು ಸಿದ್ಧಪಡಿಸಿದೆ. ಸರ್ಕಾರದ ಮುಖ್ಯಮಂತ್ರಿಯವರೆಗಿನ ಎಲ್ಲಾ ಹಂತಗಳಲ್ಲೂ ಸಮಾಲೋಚನೆಗಳನ್ನು ವಿಸ್ತ್ರತವಾಗಿ ಕೈಗೊಳ್ಳಲಾಗಿದೆ ಎಂದು ಎಚ್.ಕೆ. ಪಾಟೀಲ ತಿಳಿಸಿದರು.
ಸಾಲ ನೀಡುವವರ ಹಿತಗಳನ್ನು ನಿಯಮಗಳ ಅಡಿಯಲ್ಲಿ ರಕ್ಷಿಸಲಾಗಿದೆ. ಸಾಲ ವಸೂಲಾತಿಯನ್ನು ನಿಷೇಧಿಸಿಲ್ಲ. ನಿಷೇಧಿತ ಚಟುವಟಿಕೆಗಳ ಮೂಲಕ ಸಾಲ ವಸೂಲಾತಿಯನ್ನು ತಡೆಯಲು ತುರ್ತಾಗಿ ಸುಗ್ರಿವಾಜ್ಞೆ ಅಂತಿಮಗೊಳಿಸಿದೆ. ಈ ಸುಗ್ರಿವಾಜ್ಞೆಯು ಮಸೂದೆಯಾಗಿ ವಿಧಾನಮಂಡಲದಲ್ಲಿ ಚರ್ಚೆಗೆ ಸಹಜವಾಗಿ ಮಂಡಿಸಲಾಗುತ್ತದೆ. ಆ ಸಂದರ್ಭದಲ್ಲಿ ವಿಧಾನಮಂಡಲದ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ವ್ಯಾಪಕ ಪರಿಣಾಮ ಬೀರುವ ಕಾಯ್ದೆಯನ್ನು ಅಂತಿಮಗೊಳಿಸಲಾಗುತ್ತದೆ.
ಸರ್ಕಾರವು ತುರ್ತು ಸಂದರ್ಭಗಳಲ್ಲಿ ಸುಗ್ರೀವಾಜ್ಞೆಯ ಮೂಲಕ ಜನರ ನೆರವಿಗೆ ಬರಬೇಕಾದ ಸಂವಿಧಾನದತ್ತ ಅವಕಾಶ ಲಭ್ಯವಿರುವುದರಿಂದ ಅಂತಹ ಅವಕಾಶವನ್ನು ಬಳಕೆ ಮಾಡಿಕೊಂಡು ಈ ಸುಗ್ರಿವಾಜ್ಞೆ ಜಾರಿಗೆ ಶಿಫಾರಸ್ಸು ಮಾಡಲಾಗಿದೆ. ಪ್ರಸ್ತುತ ಕಾನೂನು ರಚಿಸಲು ರಾಜ್ಯ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದೆ. ಈ ಕಾಯ್ದೆ ಜಾರಿಗೆ ಸಂವಿಧಾನದ ಅನುಚ್ಛೇದ 213, ಎಂಟ್ರಿ 30 ಆಫ್ ಲಿಸ್ಟ್-2 (7ನೇ ಅನುಸೂಚಿ) ಯಲ್ಲಿ ತನ್ನ ಪರಮಾಧಿಕಾರ ವ್ಯಾಪ್ತಿಯನ್ನು ನಿರ್ವಹಿಸಿದೆ ಎಂಬ ಅಂಶವನ್ನು ಗಮನಕ್ಕೆ ತರಲಾಗುತ್ತದೆ ಎಂದರು.
ಮಾಜಿ ಶಾಸಕ ರಾಜು ಆಲಗೂರ ಮತ್ತಿತರರಿದ್ದರು.