

ಕೊಚ್ಚಿ: ನಟ ಸೂರ್ಯ ಅಭಿನಯದ "ಸೂರರೈ ಪೋಟ್ರು" ಸಿನಿಮಾದಲ್ಲಿ ನಾಯಕಿಯಾಗಿ ಅಮೋಘ ಅಭಿನಯ ಮಾಡಿ ಜನಮನ್ನಣೆ ಗಳಿಸಿದ ನಟಿ ಅಪರ್ಣಾ ಬಾಲಮುರಳಿ ಎರ್ನಾಕುಲಂನ ಕಾನೂನು ವಿದ್ಯಾರ್ಥಿಯೊಬ್ಬನ ಮೇಲೆ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ಆ ವಿದ್ಯಾರ್ಥಿಯನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದೆ.
ಕಾರ್ಯಕ್ರಮದ ವೇದಿಕೆ ಮೇಲೆ ವಿದ್ಯಾರ್ಥಿಯೊಬ್ಬ ಅಪರ್ಣಾ ಬಾಲಮುರಳಿ ಜೊತೆ ಅನುಚಿತವಾಗಿ ನಡೆದುಕೊಂಡಿದ್ದರು. ಈ ಬಗ್ಗೆ ಅಪರ್ಣಾ ಅಸಮಾಧಾನ ಹೊರಹಾಕಿದ್ದರು. ಇದೀಗ ಒಂದು ವಾರಗಳ ಕಾಲ ಕಾಲೇಜಿನಿಂದ ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡಿರುವ ಆಡಳಿತ ಮಂಡಳಿ, ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಅಪರ್ಣಾ ಅವರ ಬಳಿ ಕ್ಷಮೆಯಾಚಿಸಿದೆ.
ನಡೆದಿದ್ದೇನು?
ಜನವರಿ 26 ರಂದು ಬಿಡುಗಡೆಯಾಗಲಿರುವ 'ತಂಗಂ' ಚಿತ್ರದ ಪ್ರಚಾರಕ್ಕೆಂದು ಅಪರ್ಣಾ ಅವರು ಎರ್ನಾಕುಲಂನಲ್ಲಿರುವ ಕಾನೂನು ಕಾಲೇಜಿಗೆ ಭೇಟಿ ನೀಡಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಸೆಲ್ಫಿಗಾಗಿ ಅಪರ್ಣಾ ಬಳಿ ಮನವಿ ಮಾಡಿದ್ದ. ಅಪರ್ಣಾ ಎದ್ದು ನಿಂತಾಗ ಆ ವಿದ್ಯಾರ್ಥಿ ಅಪರ್ಣಾ ಅವರ ಮೇಲೆ ಕೈ ಹಾಕಲು ಯತ್ನಿಸಿದಾಗ, ಮುಜುಗರ ಅನುಭವಿಸಿದ್ದಾಗಿ ಅಪರ್ಣಾ ಹೇಳಿಕೊಂಡಿದ್ದಾರೆ.
ಮಹಿಳೆಯ ಅನುಮತಿಯಿಲ್ಲದೆ ಆಕೆಯ ದೇಹವನ್ನು ಸ್ಪರ್ಶಿಸುವುದು ತಪ್ಪು ಎಂದು ಕಾನೂನು ಕಾಲೇಜು ವಿದ್ಯಾರ್ಥಿಗೆ ಅರ್ಥವಾಗದಿರುವುದು ತುಂಬಾ ಗಂಭೀರವಾಗಿದೆ ಎಂದು ನಟಿ ಅಪರ್ಣಾ ಬೇಸರ ಹೊರಹಾಕಿದ್ದಾರೆ.
ನನ್ನ ಕೈ ಹಿಡಿದು ನಿಲ್ಲುವಂತೆ ಮಾಡಿದ್ದು ಕೂಡ ಸರಿಯಲ್ಲ. ನಂತರ ಅವರು ಸೆಲ್ಫಿಗಾಗಿ ತನ್ನ ಸುತ್ತಲೂ ಕೈ ಹಾಕಿದ್ದೂ ತರವಲ್ಲ. ಮಹಿಳೆ ಜೊತೆ ಈ ರೀತಿ ನಡೆದುಕೊಳ್ಳಬಾರದು. ಈ ಸಂಬಂಧ ನಾನು ದೂರು ದಾಖಲಿಸಲು ಬಯಸಿಲ್ಲ. ಅದಕ್ಕೆ ಸಮಯವೂ ಇಲ್ಲ. ನನ್ನ ಆಕ್ಷೇಪವೇ ಅದಕ್ಕೆ ಉತ್ತರ ಎಂದು ಅಪರ್ಣಾ ಬೇಸರ ಹೊರಹಾಕಿದರು. (ಏಜೆನ್ಸೀಸ್)