ಅಕ್ರಮ ನಿಮೂಲನೆಗೆ ಕಾನೂನಾಸ್ತ್ರ: ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಮೋಸ ತಪ್ಪಿಸಲು ಸರ್ಕಾರ ಕ್ರಮ

State
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರು ಹಾಗೂ ಅದಕ್ಕೆ ಪ್ರೋತ್ಸಾಹ ನೀಡುವವರಿಗೆ ಕಠಿಣ ಶಿಕ್ಷೆ ನೀಡಲು ಹೊಸ ಕಾನೂನು ರೂಪಿಸಲಾಗುತ್ತದೆ. ಅದರೊಂದಿಗೆ ಹೊಸ ಆಪ್ ಮೂಲಕವೂ ನಿಯಂತ್ರಣ ಮಾಡಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಕಾಳಸಂತೆಯ ಮಾರಾಟ ಒಂದೆಡೆಯಾದರೆ, ಇನ್ನೊಂದೆಡೆ ನಕಲಿ ರಸಗೊಬ್ಬರ ಮತ್ತು ಕೀಟನಾಶಕ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಈಗ ಇರುವ ಕಾನೂನಿನಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಮುಂದಿನ ಅಧಿವೇಶನದಲ್ಲಿ ಪ್ರತ್ಯೇಕ ಕಾನೂನು ತರಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಒಂದೆಡೆ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಬಿತ್ತನೆ ಸಂದರ್ಭದಲ್ಲಿ ಕಂಡುಬರುತ್ತದೆ. ಇಂತಹ ಕಾಳಸಂತೆಯ ಮಾರಾಟಗಾರರನ್ನು ಮಟ್ಟ ಹಾಕುವುದು ಅನಿವಾರ್ಯವಾಗಿದೆ. ಬುಡಕ್ಕೆ ಕೈ ಹಾಕುವ ಮೂಲಕ ಸಂಪೂರ್ಣವಾಗಿ ಅಕ್ರಮವನ್ನು ನಿಮೂಲನೆ ಮಾಡುವುದು ಸರ್ಕಾರ ಉದ್ದೇಶವಾಗಿದೆ. ಸರ್ಕಾರ ಕೃಷಿ ಇಲಾಖೆಯಲ್ಲಿ ಜಾಗೃತ ದಳವನ್ನು ರಚನೆ ಮಾಡಿದೆ. ಈ ಮೊದಲು ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಮಾತ್ರ ಜಂಟಿ ನಿರ್ದೇಶಕರಿದ್ದರು. ಈಗ ಮೈಸೂರು ಮತ್ತು ಕಲಬುರಗಿಗೆ ಪ್ರತ್ಯೇಕ ಜಂಟಿ ನಿರ್ದೇಶಕರನ್ನು ನೇಮಕ ಮಾಡಿ ಇನ್ನಷ್ಟು ಶಕ್ತಿಯುತವಾಗಿ ನಕಲಿ ಹಾವಳಿ ತಡೆಗಟ್ಟಲು ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ ಕಾನೂನು ರೂಪಿಸುವುದು ಮತ್ತು ತಂತ್ರಜ್ಞಾನದ ಬಲ ತುಂಬುವ ಕೆಲಸ ಮಾಡುತ್ತಿದೆ.

ತೆಲಂಗಾಣ ಮಾದರಿ: ತೆಲಂಗಾಣದಲ್ಲಿ ಪ್ರೆವೆಂಟೀವ್ ಡಿಟೆಂಷನ್ ಕಾಯ್ದೆ (ಪಿಡಿ ಕಾಯ್ದೆ) ತಂದು ಅಲ್ಲಿ ರಸಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಕಾಳಸಂತೆಗೆ ಕಡಿವಾಣ ಹಾಕಿದೆ. ಆದ್ದರಿಂದ ತೆಲಂಗಾಣ ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ಪಿಡಿ ಕಾಯ್ದೆ ತರಲು ಸಿದ್ಧತೆ ಮಾಡಲಾಗುತ್ತಿದೆ.

ಕಾಯ್ದೆ ಏನು ಹೇಳುತ್ತದೆ?: ಯಾವುದೇ ಅಕ್ರಮ ಮಾಡುವವರ ವಿರುದ್ಧ ದೂರು ಬಂದರೆ ಮುಂಜಾಗ್ರತಾ ಕ್ರಮವಾಗಿ ಬಂಧಿಸಬಹುದು. ಒಂದು ವರ್ಷದ ತನಕ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದೆ. ಇದರೊಂದಿಗೆ ದಂಡವೂ ಇರುತ್ತದೆ. ಜಾಮೀನು ರಹಿತ ಬಂಧನ ಇದಾಗಿರುತ್ತದೆ. ರಾಜ್ಯದಲ್ಲಿಯೂ ಇಂತಹದ್ದೇ ಕಾಯ್ದೆ ಬಂದರೆ ನಕಲಿ ಹಾಗೂ ಕಾಳಸಂತೆಗೆ ಕಡಿವಾಣ ಬೀಳುತ್ತದೆ. ರೈತರು ನೆಮ್ಮದಿಯಿಂದ ಉಸಿರಾಡಬಹುದಾಗಿರುತ್ತದೆ.

ಪ್ರತ್ಯೇಕ ಆ್ಯಪ್​: ಉತ್ಪಾದನೆಯಿಂದ ರೈತರ ಬಳಕೆಯ ತನಕ ಟ್ರಾ್ಯಕ್ ಮಾಡಲು ಅನುಕೂಲವಾಗುವಂತೆ ಪ್ರತ್ಯೇಕ ಆಪ್ ಅಭಿವೃದ್ಧಿ ಮಾಡಲಾಗುತ್ತಿದೆ. ಆಪ್ ಅಭಿವೃದ್ಧಿಪಡಿಸುವಂತೆ ಎನ್​ಐಸಿಗೆ ಸೂಚನೆ ನೀಡಲಾಗಿದೆ. ಕಾರ್ಖಾನೆಯಲ್ಲಿನ ಉತ್ಪಾದನೆಯಿಂದ, ಯಾವ ಮಾರಾಟಗಾರರಿಗೆ ಹೋಗಿದೆ, ರೈತರು ಎಷ್ಟು ಖರೀದಿ ಮಾಡಿದ್ದಾರೆ ಎಂಬ ಎಲ್ಲ ವಿವರಗಳು ಇದರಲ್ಲಿ ದಾಖಲಾಗುತ್ತದೆ. ಕಾಳಸಂತೆ ಮಾರಾಟಕ್ಕೆ ಇದರಲ್ಲಿ ಅವಕಾಶ ಇರುವುದಿಲ್ಲ. ರೈತರು, ಅಧಿಕಾರಿಗಳು ವಿವರಗಳನ್ನು ಪರಿಶೀಲನೆ ಮಾಡಬಹುದಾಗಿರುತ್ತದೆ. ಇಡೀ ದೇಶದಲ್ಲಿ ಯಾವ ರಾಜ್ಯದಲ್ಲಿಯೂ ಟ್ರಾ್ಯಕಿಂಗ್ ವ್ಯವಸ್ಥೆ ಇಲ್ಲ. ರಾಷ್ಟ್ರದಲ್ಲಿಯೇ ಆಪ್ ಅಭಿವೃದ್ಧಿಪಡಿಸಿದ ಮೊದಲ ರಾಜ್ಯ ಕರ್ನಾಟಕವಾಗಲಿದೆ. ಬೇರೆ ಯಾವುದೇ ರಾಜ್ಯದಲ್ಲಿ ಇಂತಹ ಪದ್ಧತಿ ಇಲ್ಲ. ಒಂದೂವರೆ ತಿಂಗಳಿನಲ್ಲಿ ಯೋಜನೆ ಅನುಷ್ಠಾನವಾಗಲಿದೆ.

ಹಾಳಾಗುತ್ತಿದೆ ಜಮೀನು: ನಕಲಿ ಕೀಟನಾಶಕ ಮತ್ತು ರಸಗೊಬ್ಬರ ಬಳಕೆ ಹೆಚ್ಚಾಗಿರುವ ಪರಿಣಾಮ ರಾಜ್ಯದಲ್ಲಿ ಸುಮಾರು 1 ಲಕ್ಷ ಹೆಕ್ಟೇರ್ ಭೂಮಿ ಫಲವತ್ತತೆಯನ್ನು ಕಳೆದುಕೊಂಡಿದೆ ಎಂಬ ದೂರುಗಳಿವೆ. ಬಹುತೇಕ ಜಿಲ್ಲೆಗಳಲ್ಲಿ ರೈತ ಸಂಘಟನೆಗಳೇ ಮಾರಾಟಗಾರರ ಮೇಲೆ ದಾಳಿ ಮಾಡಿ ನಕಲಿ ಮಾರಾಟ ತಡೆ ಹಿಡಿದಿದ್ದಾರೆ. ಕೃಷಿ ಇಲಾಖೆಯ ಜಾಗೃತ ದಳ ಸಹ ಸಾಕಷ್ಟು ಪ್ರಕರಣಗಳನ್ನು ದಾಖಲಿಸಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಈ ರೀತಿಯ ನಕಲಿ ರಸಗೊಬ್ಬರ ಮತ್ತು ಕೀಟನಾಶಕ ಸರಬರಾಜು ಆಗುತ್ತದೆ ಎಂಬ ದೂರುಗಳಿವೆ.

22 ಸಾವಿರ ಕೋಟಿ ರೂ. ವ್ಯವಹಾರ: ರಾಜ್ಯದಲ್ಲಿ ರಸಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಪ್ರತಿ ವರ್ಷ 22 ಸಾವಿರ ಕೋಟಿ ರೂ.ಗಳಷ್ಟು ದೊಡ್ಡ ಮಟ್ಟದ ವಹಿವಾಟು ನಡೆಯುತ್ತದೆ. ಸುಮಾರು 10 ಸಾವಿರಕ್ಕೂ ಹೆಚ್ಚಿನ ಮಾರಾಟಗಾರರು ರಾಜ್ಯಾದ್ಯಂತ ಇದ್ದಾರೆ. ಇಷ್ಟು ದೊಡ್ಡ ಮಟ್ಟದ ವಹಿವಾಟು ಇರುವುದರಿಂದಲೇ ಕಾಳಸಂತೆಕೋರರ ಹಾಗೂ ನಕಲಿ ವಸ್ತುಗಳ ಮಾರಾಟ ದೊಡ್ಡ ಪ್ರಮಾಣದಲ್ಲಿಯೇ ಇದೆ.

ರೋಗ ಬಂದಾಗ ಚಿಕಿತ್ಸೆ ಪಡೆಯುವುದಕ್ಕಿಂತ ಬರದಂತೆ ತಡೆಯುವುದು ಮುಖ್ಯ. ಅದೇ ನಿಟ್ಟಿನಲ್ಲಿಯೇ ಹೊಸ ಕಾನೂನು ತರುವುದು ಹಾಗೂ ಆಪ್ ಅಭಿವೃದ್ದಿಪಡಿಸಿ ತಂತ್ರಜ್ಞಾನ ಬಳಕೆಯ ಕಡೆ ಗಮನ ಹರಿಸಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಅದಕ್ಕಾಗಿಯೇ ಇಲಾಖೆಯಲ್ಲಿ ಜಾಗೃತ ದಳವನ್ನು ಇನ್ನಷ್ಟು ಶಕ್ತಿಯುತವನ್ನಾಗಿ ಮಾಡಿದ್ದೇವೆ. | ಬಿ.ಸಿ. ಪಾಟೀಲ್ ಕೃಷಿ ಸಚಿವ

ಹೊಸ ಕಾಯ್ದೆಯ ಲಾಭ
  • ಕಾಳಸಂತೆಕೋರರ ಮುಂಜಾಗ್ರತೆ ಬಂಧನ
  • ದರ ಹೆಚ್ಚಾಗದಂತೆ ನೋಡಿಕೊಳ್ಳಲು ಅನುಕೂಲ
  • ರೈತರಿಗೆ ಅಗತ್ಯ ಇರುವಷ್ಟು ಉತ್ಪನ್ನ ಗಳು ಲಭ್ಯ
  • ಎಲ್ಲಿಯೂ ಗಲಾಟೆಗಳು ಆಗುವು ದಿಲ್ಲ
  • ಎಲ್ಲಿಯೂ ಕಳಪೆ ಉತ್ಪನ್ನಗಳು ಇರುವುದಿಲ್ಲ

ಅನುಕೂಲಗಳೇನು?

  • ಉತ್ಪನ್ನಗಳು ಎಲ್ಲಿ ಮಾರಾಟ ಎಂಬ ನಿಖರ ಮಾಹಿತಿ ಲಭ್ಯ
  • ಕಾರ್ಖಾನೆಯಿಂದ ಎಲ್ಲಿಯೂ ಕಾಳಸಂತೆಗೆ ಹೋಗಿಲ್ಲ ಎಂಬ ವಿವರ
  • ತೆರಿಗೆ ವಂಚನೆಗೂ ತಡೆ
  • ರೈತರಿಗೆ ಗುಣಮಟ್ಟದ ವಸ್ತುಗಳು ಲಭ್ಯ
  • ಲೈಸನ್ಸ್​ದಾರರ ಮಾಹಿತಿ

24 ಪ್ರಕರಣದಲ್ಲಿ ಶಿಕ್ಷೆ: ರಾಜ್ಯದಲ್ಲಿ ಕೃಷಿ ಇಲಾಖೆಯ ಜಾಗೃತ ದಳ ಕ್ರಿಯಾಶೀಲವಾದ ನಂತರ 276 ಮೊಕದ್ದಮೆಗಳನ್ನು ದಾಖಲು ಮಾಡಲಾಗಿದೆ. 24 ಪ್ರಕರಣಗಳಲ್ಲಿ ಇದೇ ಮೊದಲ ಬಾರಿಗೆ ಶಿಕ್ಷೆಯಾಗಿದೆ. 27 ಕೋಟಿ ರೂ.ಗಳಷ್ಟು ದೊಡ್ಡ ಮೊತ್ತದ ವಸ್ತುಗಳನ್ನು ಜಫ್ತಿ ಮಾಡಲಾಗಿದೆ.

ಪ್ರತ್ಯೇಕ ಖಾತೆ: ಕೃಷಿ ಇಲಾಖೆಯಲ್ಲಿ ಈಗ ಜಾಗೃತ ದಳ ಬಲ ಪಡಿಸಲಾಗಿದೆ. ನಕಲಿ ಮಾರಾಟ ಹಾಗೂ ಕಾಳಸಂತೆಕೋರರನ್ನು ಬಂಧಿಸಿ ಕ್ರಮ ಕೈಗೊಂಡಾಗ ಅವರಿಂದ ವಶಪಡಿಸಿಕೊಳ್ಳುವ ಹಣ ವನ್ನು ಠೇವಣಿ ಇಡುವ ಸಲುವಾಗಿ ಬ್ಯಾಂಕ್​ನಲ್ಲಿ ಪ್ರತ್ಯೇಕ ಖಾತೆಯನ್ನೇ ತೆರೆಯಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net