

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಲಿಂಗಾಯತ ಪಂಚಮಸಾಲಿಗಳ 2ಎ ಮೀಸಲಾತಿ ಬೇಡಿಕೆ ಹೋರಾಟ ಹಿಂಸಾರೂಪ ಪಡೆದುಕೊಂಡಿದೆ. ಮಂಗಳವಾರ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಪರಿಣಾಮ 30ಕ್ಕೂ ಹೆಚ್ಚು ಜನರು ಗಾಯಗೊಂಡರು. ಇದರಿಂದ ಕೆರಳಿದ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ , ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಅರವಿಂದ ಬೆಲ್ಲದ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ಹೋರಾಟ ನಿಲ್ಲದು: ಪೊಲೀಸರ ಲಾಠಿಚಾರ್ಜ್ ಖಂಡಿಸಿರುವ ಪಂಚಮಸಾಲಿ ಸಮುದಾಯ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಹೆದ್ದಾರಿ ಬಂದ್: ಮುಖ್ಯಮಂತ್ರಿ ಸಿದ್ದರಾಮಯ್ಯ ಸುವರ್ಣಸೌಧದಿಂದ ತೆರಳುವವರೆಗೂ 1 ಗಂಟೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ಮಂಗಳವಾರ ಸುವರ್ಣಸೌಧದ ಬಳಿಯ ಕೊಂಡಸಕೊಪ್ಪ ಗ್ರಾಮದಲ್ಲಿ ನಡೆದ ಪ್ರತಿಭಟನೆ, ಸಂಘರ್ಷ ರೂಪ ಪಡೆದುಕೊಂಡಿದ್ದರಿಂದ ಪೊಲೀಸರು ಸೇರಿ 30ಕ್ಕೂ ಅಧಿಕ ಜನ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆಯಿತು.
ಮೀಸಲಾತಿಗಾಗಿ ಆಗ್ರಹಿಸಿ ನಡೆಯುತ್ತಿದ್ದ ಕೊಂಡಸಕೊಪ್ಪದ ಬಳಿಯ ವೇದಿಕೆಗೆ ಪ್ರತಿಭಟನಾಕಾರರ ಮನವಿ ಸ್ವೀಕರಿಸಲು ಸಚಿವ ಎಚ್.ಸಿ.ಮಹಾದೇವಪ್ಪ ಆಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿಗಳೇ ಬಂದು ಮನವಿ ಸ್ವೀಕರಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ನಂತರ ನಾವೇ ಸುವರ್ಣಸೌಧಕ್ಕೆ ತೆರಳಿ ಮನವಿ ನೀಡುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ತಂಡ ಸುವರ್ಣಸೌಧ ಕಡೆ ಹೊರಟಿತು. ಈ ವೇಳೆ ಕೊಂಡಸಕೊಪ್ಪ ಕ್ರಾಸ್ ಬಳಿ ಪೊಲೀಸರು ತಡೆದರು. ರೊಚ್ಚಿಗೆದ್ದ ಜನರ ಗುಂಪು ಸುವರ್ಣಸೌಧ ಮುತ್ತಿಗೆಗೆ ಮುಂದಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಪೊಲೀಸರತ್ತ ಕಲ್ಲು ತೂರಿದರು. ಈ ವೇಳೆ ಪೊಲೀಸರು ಸೇರಿ 30ಕ್ಕೂ ಅಧಿಕ ಜನ ಗಾಯಗೊಂಡರು. ಹಲವು ವಾಹನಗಳು ಜಖಂಗೊಂಡವು. ಸ್ಥಳದಲ್ಲಿದ್ದ ಬಸವಜಯ ಸ್ವಾಮೀಜಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ, ಈರಣ್ಣ ಕಡಾಡಿ ಸೇರಿ ಇತರ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಬಂದ್: ಹೋರಾಟದ ಮುಖಂಡರು ಸುವರ್ಣಸೌಧ ಮುತ್ತಿಗೆಗೆ ಮುಂದಾದಾಗ, ಸಿಎಂ ಸುವರ್ಣ ಸೌಧದಿಂದ ತೆರಳುವವರೆಗೂ ಒಂದು ಗಂಟೆ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಟ್ರಾಫಿಕ್ ಸಮಸ್ಯೆ ಉಂಟಾಗಿ ಪ್ರಯಾಣಿಕರು ಪರದಾಡಿದರು.
ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು: ಕೊಂಡಸ ಕೊಪ್ಪದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹೋರಾಟ ತಡೆಯಲು ಆದೇಶಿಸಿದ್ದು ಸರಿಯಲ್ಲ. ಸಂವಿಧಾನಬದ್ಧವಾಗಿ ಹೋರಾಟ ನಡೆಸಿ ಮೀಸಲಾತಿ ಕೇಳುತ್ತಿದ್ದೇವೆ. ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲದು ಎಂದು ಸರ್ಕಾರದ ವಿರುದ್ಧ ಗುಡುಗಿದರು.
ಸಮಾಜಕ್ಕೆ ಅನ್ನ ನೀಡುವ ದೊಡ್ಡ ಸಮಾಜಕ್ಕೆ ಸರ್ಕಾರ ಮೀಸಲಾತಿ ನೀಡುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಹಲವು ಬಾರಿ ಮುಖ್ಯ ಮಂತ್ರಿಯವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಯಾವುದೇ ಸರ್ಕಾರಕ್ಕೆ ಮುಜುಗರ ತರುವಂತೆ ಹೋರಾಟ ಮಾಡಿಲ್ಲ. ಮೀಸಲಾತಿ ಆದೇಶ ಸಿಗುವವರೆಗೂ ಹೋರಾಟ ನಿಲ್ಲದು ಎಂದರು.
ಸರ್ಕಾರದ ವಿರುದ್ಧ ಯತ್ನಾಳ ವಾಗ್ದಾಳಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದವರಿದ್ದೇವೆ. ನಮ್ಮ ಮುಂದಿನ ಪೀಳಿಗೆಗಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರ ಸುಳ್ಳು ಆಶ್ವಾಸನೆಗಳನ್ನೇ ನೀಡುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಹೋರಾಟ ಹತ್ತಿಕ್ಕಲು ಸರ್ಕಾರ ಜಿಲ್ಲಾಡಳಿತ ಮೂಲಕ ಯತ್ನಿಸಿದ್ದು ಸರಿಯಲ್ಲ. ಆದರೆ, ನಮ್ಮ ಶಕ್ತಿ ಏನು ಎಂಬುವುದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಸರ್ಕಾರ ಕೂಡಲೇ ಪಂಚಮಸಾಲಿಗಳನ್ನು 2ಎಗೆ ಸೇರಿಸಬೇಕು ಎಂದರು.
ಸಚಿವ ಮಹಾದೇವಪ್ಪ ಮಾತನಾಡಿ, ಕಾನೂನು ಮತ್ತು ಸಂವಿಧಾನದ ಚೌಕಟ್ಟಿನಲ್ಲಿರುವ ಅವಕಾಶಗಳನ್ನು ನೋಡಿಕೊಂಡು ಚರ್ಚೆ ನಡೆಸಲಾಗುವುದು. ಸಮುದಾಯದ ಬೇಡಿಕೆ ಸಿಎಂ ಗಮನಕ್ಕೆ ತರಲಾಗುವುದು ಎಂದರು. ಸಂಸದ ಈರಣ್ಣ ಕಡಾಡಿ, ಶಾಸಕರಾದ ಶಂಕರ ಪಾಟೀಲ ಮುನೆನಕೊಪ್ಪ, ಬಾಬಾಸಾಹೇಬ ಪಾಟೀಲ, ಅರವಿಂದ ಬೆಲ್ಲದ, ಸಿ.ಸಿ.ಪಾಟೀಲ, ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಇತರರಿದ್ದರು.
ರಾಜ್ಯದಲ್ಲಿ ಹಿಟ್ಲರ್ ಸರ್ಕಾರ: ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಹಿಟ್ಲರ್ ಸರ್ಕಾರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕಟಣೆ ಹೊರಡಿಸಿರುವ ಅವರು, ಸಮಾಜಕ್ಕೆ ಮೀಸಲಾತಿ ನೀಡುವ ಕುರಿತು ಡಿ.10ರ ಒಳಗಾಗಿ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು ಎಂದು ಗಡುವು ನೀಡಿತ್ತು. ಆದರೆ, ಸಿಎಂ ನಿರ್ಲಕ್ಷ್ಯ ಮಾಡಿದರು. ಅಲ್ಲದೆ, ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸದೆ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಇದರಿಂದ ಹೋರಾಟಗಾರರ ಸಹನೆಯ ಕಟ್ಟೆ ಒಡೆದಿದೆ. ಆದರೆ, ಪೊಲೀಸರು ಲಾಠಿಚಾರ್ಜ್ ನಡೆಸಿರುವುದು ಖಂಡನೀಯ ಎಂದಿದ್ದಾರೆ.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ: ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೋಗುತ್ತಿದ್ದಾಗ ಎಡಿಜಿಪಿ, ಪೊಲೀಸ್ ಆಯುಕ್ತರು ಕುತಂತ್ರದಿಂದ ಲಾಠಿಚಾರ್ಜ್ ಮಾಡಿದ್ದಾರೆ. ಹಾಗಾಗಿ ಸರ್ಕಾರದ ದೌರ್ಜನ್ಯ ಖಂಡಿಸಿ ಡಿ.12ರಂದು ರಾಜ್ಯಾದ್ಯಂತ ಹಳ್ಳಿ, ತಾಲೂಕು, ಜಿಲ್ಲಾ ರಸ್ತೆಗಳನ್ನು ಬಂದ್ ಮಾಡಿ ಹೋರಾಟ ನಡೆಸುತ್ತೇವೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ವರ್ಷಗಳಿಂದ ಸಮಾಜಕ್ಕೆ 2ಎ ಮೀಸಲಾತಿಗಾಗಿ ಶಾಂತಿಯುತ ಹೋರಾಟ ನಡೆಸಿಕೊಂಡು ಬರುತ್ತಿದ್ದೇವೆ. ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಬೇಕು ಎಂಬುವುದು ನಮ್ಮ ಬೇಡಿಕೆಯಾಗಿತ್ತು. ಆದರೆ, ಸಿಎಂ ಪರವಾಗಿ ಬಂದ ಸಚಿವರ ಮಾತು ಸಮಾಧಾನ ತರಲಿಲ್ಲ. ಹಾಗಾಗಿ ನಾವು ಮುತ್ತಿಗೆಗೆ ಹೊರಟ ವೇಳೆ ಪೊಲೀಸರೇ ಲಾಠಿಚಾರ್ಜ್ ಮಾಡಿದರು. ಇನ್ನು ಮುಂದೆ ನಮ್ಮ ಹೋರಾಟ ಉಗ್ರರೂಪದಲ್ಲಿಯೇ ನಡೆಯಲಿದೆ. ಲಾಠಿಚಾರ್ಜ್ ನಡೆಸಿರುವ ಎಡಿಜಿಪಿ, ಪೊಲೀಸ್ ಆಯುಕ್ತರನ್ನು ಕೂಡಲೇ ಅಮಾನತು ಮಾಡಬೇಕು ಎಂದರು.
ಲಾಠಿಚಾರ್ಜ್ ಮಾಡಿದ ಏಕೈಕ ಸರ್ಕಾರ: ಸಮಾಜದ ಮೇಲೆ ಲಾಠಿಚಾರ್ಜ್ ಮಾಡಿರುವ ಏಕೈಕ ಸರ್ಕಾರ ಕಾಂಗ್ರೆಸ್. ನಮ್ಮ ಮೇಲೆ ಗೋಲಿಬಾರ್ ನಡೆಸುವ ಮಟ್ಟಕ್ಕೆ ಪೊಲೀಸರು ನಡೆದುಕೊಂಡಿದ್ದಾರೆ. ಸರ್ಕಾರವು ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರೆ 2028ಕ್ಕೆ ನಮಗೆ ಬೇಕಾದ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ ಎಂದರು.
ಇದೊಂದು ತುಘಲಕ್ ಸರ್ಕಾರ: ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಮುಖಂಡರ ಮೇಲೆ ಲಾಠಿ ಚಾರ್ಜ್ ನಡೆಸಿರುವುದಕ್ಕೆ ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಮಸಾಲಿ ಹೋರಾಟವನ್ನು ಹತ್ತಿಕ್ಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಹಿಟ್ಲರ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಸಿದ್ದರಾಮಯ್ಯ ಸರ್ವಾಧಿಕಾರಿ ಎಂದಿರುವ ಅವರು, ಇದೊಂದು ತುಘಲಕ್ ಸರ್ಕಾರ ಎಂದು ತರಾಟೆಗೆ ತೆಗೆದು ಕೊಂಡಿದ್ದಾರೆ. ಪಂಚಮಸಾಲಿ ಜಗದ್ಗುರುಗಳನ್ನು ಹೇಯವಾಗಿ ನಡೆಸಿಕೊಂಡಿರುವುದು ನನಗೆ ಅತೀವ ನೋವುಂಟು ಮಾಡಿದೆ. ಇದು ಶಿಲಾಯುಗ ಕಾಲದ ಮನಃಸ್ಥಿತಿಯ ಸರ್ಕಾರ ಎಂದು ಹರಿಹಾಯ್ದಿದ್ದಾರೆ.
ಚಳವಳಿ ಹತ್ತಿಕ್ಕುವ ಯತ್ನ: ಪಂಚಮಸಾಲಿ ಸಮುದಾಯದ 2ಎ ಪ್ರವರ್ಗದ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರರ ಮೇಲೆ ಲಾಠಿಚಾರ್ಜ್ ಮಾಡಿರುವುದನ್ನು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಖಂಡಿಸಿದ್ದಾರೆ. ಹೋರಾಟ ಈ ಮುಂಚೆಯೇ ಸರ್ಕಾರದ ಅರಿವಿಗೆ ಬಂದಿದ್ದರೂ ಯಾವುದೇ ಮುಂಜಾಗ್ರತಾ ಕ್ರಮ ವಹಿಸದ ಕಾಂಗ್ರೆಸ್ ಸರ್ಕಾರ ದುರುದ್ದೇಶಪೂರ್ವಕವಾಗಿ ಚಳವಳಿಯನ್ನು ಹತ್ತಿಕ್ಕುವುದಕ್ಕಾಗಿ ಚಳವಳಿ ನಿರತ ಅಮಾಯಕರ ಮೇಲೆ ಲಾಠಿಚಾರ್ಜ್ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಳವಳಿಗಾರರು ಮಾರಣಾಂತಿಕ ಪೆಟ್ಟು ಅನುಭವಿಸಲು ಕಾರಣವಾಗಿರುವುದು ಖಂಡನೀಯ. ವಾರದಿಂದಲೂ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳು ಹೋರಾಟದ ಕುರಿತು ಮಾಹಿತಿಗಳನ್ನು ಒದಗಿಸುತ್ತಲೇ ಬಂದಿದ್ದಾರೆ. ಈ ಹಂತದಲ್ಲಿ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಹುಡುಕುವ ಮಾಗೋಪಾಯ ಕಂಡುಹಿಡಿಯದೇ ಲಾಠಿ ಏಟು ನೀಡಿರುವುದು ಈ ಸರ್ಕಾರದ ಅಸಮರ್ಥ ನಡೆಗೆ ಸಾಕ್ಷಿ ಎಂದಿದ್ದಾರೆ. ಈ ಸರ್ಕಾರ ಹಿಂದೆಯೂ ರೈತ ಚಳವಳಿಗಳನ್ನು ಬಗ್ಗುಬಡಿದ ಮಾದರಿಯಲ್ಲೆ ಇದನ್ನು ಮಾಡಲಾಗಿದೆ ಎಂದು ದೂರಿರುವ ಅವರು, ಬೇಜವಾಬ್ದಾರಿಯಿಂದ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿ, ಅಮಾಯಕರ ಮೇಲೆ ಹಲ್ಲೆ ಆಗಿರುವ ಕುರಿತು ಕ್ಷಮೆಯಾಚಿಸಲಿ. ಮಾರಣಾಂತಿಕ ಪೆಟ್ಟು ತಿಂದವರಿಗೆ ಸೂಕ್ತ ಚಿಕಿತ್ಸೆ ಹಾಗೂ ಪರಿಹಾರವನ್ನು ಒದಗಿಸಲಿ ಎಂದು ಒತ್ತಾಯಿಸಿದ್ದಾರೆ.
ಕುತಂತ್ರದಿಂದ ಲಾಠಿಚಾರ್ಜ್ ಮಾಡಿದ್ದಾರೆ. ಸರ್ಕಾರದ ದೌರ್ಜನ್ಯ ಖಂಡಿಸಿ ಡಿ.12ರಂದು ರಾಜ್ಯಾದ್ಯಂತ ಹಳ್ಳಿ, ತಾಲೂಕು, ಜಿಲ್ಲಾ ರಸ್ತೆಗಳನ್ನು ಬಂದ್ ಮಾಡಿ ಹೋರಾಟ ನಡೆಸುತ್ತೇವೆ .
| ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲ ಸಂಗಮ ಪಂಚಮಸಾಲಿ ಪೀಠ