ಹನುಮಭಕ್ತ ಯುವಕರ ಮೇಲೆ ಲಾಠಿಚಾರ್ಜ್; ಕುಮಾರಸ್ವಾಮಿ ಕಿಡಿ

HD Kumaraswamy
Published on

ಬೆಂಗಳೂರು: ಕಾರ್ಯಕ್ರಮಕ್ಕೆ ಶಾಸಕರನ್ನು ಕರೆಯಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಮಂಡ್ಯದ ಕೆರಗೋಡು ಗ್ರಾಮದ ಯುವಕರ ಮೇಲೆ ದಬ್ಬಾಳಿಕೆ ನಡೆಸಿ ಲಾಠಿಚಾರ್ಜ್ ಮಾಡಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೆರಗೋಡು ಗ್ರಾಮದಲ್ಲಿ ಏನೆಲ್ಲಾ ಧ್ವಂಸ ಮಾಡಲಾಗಿಯೋ ಅದೆಲ್ಲ ಯಥಾಸ್ಥಿತಿಗೆ ಬರಬೇಕು. ನಾನು ಕೆರಗೋಡು ಗ್ರಾಮದ ಯುವಕರ ಜತೆ ಇದ್ದೇನೆ ಎಂದು ಘೋಷಣೆ ಮಾಡಿದ್ದಾರೆ.

ಮಂಡ್ಯದ ಕೆರಗೋಡುನಲ್ಲಿ ಹನುಮಧ್ವಜದ ವಿಷಯದಲ್ಲಿ ಪೊಲೀಸರು, ರಾಜ್ಯ ಕಾಂಗ್ರೆಸ್ ಸರ್ಕಾರದ ವರ್ತನೆ ಅಕ್ಷಮ್ಯ, ಅನಾಗರಿಕ. ಕಾಂಗ್ರೆಸ್‌ನ ಕಣಕಣದಲ್ಲೂ ಜನದ್ವೇಷವೇ ತುಂಬಿದೆ. ಆ ಮನಃಸ್ಥಿತಿಯನ್ನು ಮತ್ತೆಮತ್ತೆ ರುಜುವಾತು ಮಾಡುತ್ತಿದೆ. ಮುಗ್ಧ ಯುವಕರ ಮೇಲೆ ಲಾಠಿಚಾರ್ಜ್ ಮಾಡುವವರೆಗೂ ಆ ದ್ವೇಷ ಬಂದು ನಿಂತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕರ್ನಾಟಕ ಹನುಮ ಜನ್ಮಸ್ಥಳ. ನನ್ನ ಹೆಸರಿನಲ್ಲೂ ರಾಮನಿದ್ದಾನೆ ಎಂದು ಹುಸಿಭಕ್ತಿಯ ಢೋಂಗಿಗಳಿಗೆ ಹನುಮಭಕ್ತಿ ಅರ್ಥವಾಗುವುದೇ? ವೋಟಿಗಾಗಿ, ಅಧಿಕಾರಕ್ಕಾಗಿ ಜಾತಿ-ಧರ್ಮಗಳನ್ನು ಒಡೆದು ದೇವರನ್ನೂ ರಾಜಕಾರಣಕ್ಕೆ ಎಳೆದು ತರುತ್ತಿರುವುದು, ಓಲೈಕೆ ರಾಜಕಾರಣದ ವಿಕೃತಿ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net