

ಬೆಂಗಳೂರು: ನಗರದಲ್ಲಿ ತಡರಾತ್ರಿ 2.9 ಕೋಟಿ ರೂಪಾಯಿ ಮೌಲ್ಯದ ಫೋರ್ಶ್ ಕಾರಿನಲ್ಲಿ ಜಾಲಿರೈಡ್ ಮಾಡಿದ ಚಾಲಕನನ್ನು ಬಂಧಿಸಿ, ಕಾರನ್ನು ಜಪ್ತಿ ಮಾಡಲಾಗಿದೆ.
ಶನಿವಾರ (ಜು. 25) ತಡರಾತ್ರಿ 2.20ರಲ್ಲಿ ಟಿ. ಚೌಡಯ್ಯ ರಸ್ತೆಯಲ್ಲಿ ಬಿಡಿಎ ಸೇತುವೆ ಕಡೆಯಿಂದ ಹೈಗ್ರೌಂಡ್ಸ್ ಜಂಕ್ಷನ್ ಕಡೆಗೆ ಪಿವೈ-05, ಜೆ-8028 ನೋಂದಣಿ ಫಲಕ ಹೊಂದಿದ್ದ ಕಾರು ಅತಿವೇಗವಾಗಿ ಕರ್ಕಶ ಶಬ್ದ ಮಾಡುತ್ತ ಸಂಚರಿಸಿತ್ತು. ಇದರಿಂದಾಗಿ ಇತರ ವಾಹನ ಸವಾರರು ಹಾಗೂ ಚಾಲಕರಿಗೆ ಭಯ ಉಂಟಾಗಿತ್ತು. ಸ್ಥಳದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಮಂಜುನಾಥ್, ಕಾರಿನ ನೋಂದಣಿ ಸಂಖ್ಯೆ ಬರೆದುಕೊಂಡು ದೂರು ದಾಖಲಿಸಿದ್ದರು.
ಇದನ್ನೂ ಓದಿರಿ ಗ್ರಾಹಕರ ಖಾತೆಗೆ ಬ್ಯಾಂಕ್ ನೌಕರನಿಂದಲೇ ಕನ್ನ!
ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಸೋಮವಾರ (ಜು.27) ಹೈಗ್ರೌಂಡ್ಸ್ ಸಂಚಾರ ಪೊಲೀಸರು 2.9 ಕೋಟಿ ರೂ. ಮೌಲ್ಯದ ಫೋರ್ಶ್ ಕಾರನ್ನು ಜಪ್ತಿ ಮಾಡಿದ್ದಾರೆ. ಕಾರು ಚಾಲಕ ಹರಿ ಎಂಬಾತನನ್ನು ಬಂಧಿಸಲಾಗಿದೆ.
ವೆಂಕಟಮ್ಮ ಎಂಟರ್ ಪ್ರೈಸಸ್ ಹೆಸರಿನಲ್ಲಿ ಕಾರು ಖರೀದಿ ಮಾಡಲಾಗಿದೆ. ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.