

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ(ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್) ನಿರ್ಮಿಸಿರುವ ಸಾಕ್ಷ್ಯಚಿತ್ರದ ವಿವಾದ ಮತ್ತಷ್ಟು ಕಾವೇರುತ್ತಿದೆ. ವಿವಾದಾತ್ಮಕ ಡಾಕ್ಯುಮೆಂಟರಿ 'ದಿ ಮೋದಿ ಕ್ವೆಶ್ಚನ್'ನ ಲಿಂಕ್ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿ, ಭಾರತದಲ್ಲಿ ಇದರ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ. ಆದರೂ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ(ಜೆಎನ್ಯು) ಚಿತ್ರಪ್ರದರ್ಶನ ಮಾಡಲು ಮುಂದಾದ ವೇಳೆ ಕಾಲೇಜಿನಲ್ಲಿ ಕಲ್ಲು ತೂರಟ ನಡೆದಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಿಷೇಧದ ನಡವೆಯೂ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಡಾಕ್ಯುಮೆಂಟರಿಯನ್ನ ಪ್ರದರ್ಶಿಸಿದ್ದಾರೆ. ಕೇರಳದಲ್ಲಿ ಗಣರಾಜ್ಯ ದಿನದಂದು ಇದನ್ನು ಪ್ರದರ್ಶಿಸುವುದಾಗಿ ಹಲವು ಸಂಘಟನೆಗಳು ಹೇಳಿವೆ. ಇದರ ಬೆನ್ನಲ್ಲೇ ಜೆಎನ್ಯು ವಿವಿಯ ವಿದ್ಯಾರ್ಥಿ ಸಂಘ ಚಿತ್ರಪ್ರದರ್ಶನ ಮಾಡುವುದಾಗಿ ಘೋಷಿಸಿತ್ತು. ಆದರೆ ವಿವಿ ಆಡಳಿತ ಮಂಡಳಿ ಇದಕ್ಕೆ ಅನುಮತಿ ನಿರಾಕರಿಸಿತ್ತು. ಆದರೂ ಕೆಲ ವಿದ್ಯಾರ್ಥಿಗಳು ಮೋದಿ ಮತ್ತು ಗಲಭೆಯ ಕುರಿತಾದ ಆಕ್ಷೇಪಾರ್ಹ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಲು ಮುಂದಾದ ವೇಳೆ ಗಲಾಟೆ ನಡೆಯುವ ಸಂಭವಿಸುವ ಮುನ್ಸೂಚನೆ ಅರಿತು ವಿವಿಯಲ್ಲಿ ಇಂಟರ್ನೆಟ್ ಮತ್ತು ವಿದ್ಯುತ್ ಕಡಿತ ಮಾಡಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ವಿವಾದ?: ಬಿಬಿಸಿ ಜ.17ರಂದು 'ದಿ ಮೋದಿ ಕ್ವೆಶ್ಚನ್' ಸಾಕ್ಷ್ಯಚಿತ್ರದ ಮೊದಲ ಭಾಗವನ್ನು ಪ್ರಸಾರ ಮಾಡಿತ್ತು. 2002ರಲ್ಲಿ ಗುಜರಾತ್ನಲ್ಲಿ ಗೋಧ್ರಾ ಹತ್ಯಾಕಾಂಡದ ನಂತರ ರಾಜ್ಯಾದ್ಯಂತ ನಡೆದ ಹಿಂಸಾಚಾರ ಕುರಿತ 59 ನಿಮಿಷದ ಡಾಕ್ಯುಮೆಂಟರಿ ಇದಾಗಿದ್ದು, ಆಗ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಪಾತ್ರದತ್ತ ಅದು ಬೆರಳು ಮಾಡಿದೆ.