ಲಂಡನ್​ನಲ್ಲೇ ಉಳಿಯಲು ಮಲ್ಯಗೆ ಕೊನೆಯ ಅವಕಾಶ

page 9 3
Published on

ಲಂಡನ್: ಭಾರತಕ್ಕೆ ಹಸ್ತಾಂತರಿಸುವ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ತಪ್ಪಿದ್ದರೂ ಲಂಡನ್​ನಲ್ಲೇ ಉಳಿದುಕೊಳ್ಳಲು ವಿಜಯ್ ಮಲ್ಯಗೆ ಇನ್ನೂ ಒಂದು ಅವಕಾಶವಿದೆ. ರಾಜಕೀಯ ಆಶ್ರಯ ನೀಡುವಂತೆ ಅವರು ಬ್ರಿಟನ್ ಸರ್ಕಾರವನ್ನು ಕೋರಬಹುದಾಗಿದೆ. ಈ ಅರ್ಜಿಯನ್ನು ಬ್ರಿಟನ್ ಸರ್ಕಾರ ಪರಿಶೀಲಿಸಲು ಒಪ್ಪಿಕೊಂಡರೆ ಅದು ಇತ್ಯರ್ಥವಾಗುವವರೆಗೂ ಮಲ್ಯ ಹಸ್ತಾಂತರಕ್ಕೆ ತಡೆಯುಂಟಾಗುತ್ತದೆ. ಹಸ್ತಾಂತರ ಕಾಯ್ದೆ 2003ರ ಪ್ರಕಾರ ಇಂತಹ ಅವಕಾಶ ಬ್ರಿಟನ್​ನಲ್ಲಿ ಇದೆ.

ರಾಜಕೀಯ ಆಶ್ರಯದ ಅರ್ಜಿಯ ವಿಚಾರಣೆಯನ್ನು ಗೃಹ ಸಚಿವಾಲಯ ಕೆಲವು ಜನರ ಮುಂದೆ ಮಾತ್ರ ನಡೆಸುತ್ತದೆ. ಇದರ ವಿವರ ಕೊನೆಯವರೆಗೂ ಬಹಿರಂಗ ಆಗುವುದಿಲ್ಲ. ಸ್ವದೇಶದಿಂದ ಅರ್ಜಿದಾರನಿಗೆ ಪ್ರಾಣ ಬೆದರಿಕೆ ಬರಬಹುದೆಂಬ ಕಾರಣಕ್ಕೆ ವಿಚಾರವನ್ನು ಗೌಪ್ಯವಾಗಿಡಲಾಗುತ್ತದೆ. ಮಲ್ಯ ಭಾರತಕ್ಕೆ ಹಸ್ತಾಂತರ ಆಗುವುದನ್ನು ತಪ್ಪಿಸಲು ಅಥವಾ ಆದೇಶ ಜಾರಿಯ ವಿಳಂಬಕ್ಕೆ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳುತ್ತಾರೆ. ಅದರೆ ಈಗಾಗಲೇ ಹಸ್ತಾಂತರ ಆದೇಶ ಹೊರಬಿದ್ದಿರುವ ಕಾರಣ ರಾಜಕೀಯ ಆಶ್ರಯಕ್ಕೆ ಸಲ್ಲಿಸಿದ ಅರ್ಜಿವಜಾ ಕೂಡ ಆಗಬಹುದು ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net