ಕಟ್​, ಕಾಪಿ, ಪೇಸ್ಟ್​ ಹಿಂದಿನ ಮಾಂತ್ರಿಕನ ಸಾವು: ಪ್ರಸಿದ್ಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಲ್ಯಾರಿ ಟೆಸ್ಲರ್​

cutcopy
Published on

ವಾಷಿಂಗ್ಟನ್​: ಕಟ್​, ಕಾಪಿ ಮತ್ತು ಪೇಸ್ಟ್​ ಕಂಡುಹಿಡಿದಿದ್ದ ಕಂಪ್ಯೂಟರ್​ ವಿಜ್ಞಾನಿ ಲ್ಯಾರಿ ಟೆಸ್ಲರ್​(74) ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರದಂದು ವಯೋಸಹಜ ಸಾವನ್ನಪ್ಪಿದ್ದಾರೆ.

1945ರಲ್ಲಿ ನ್ಯೂಯಾರ್ಕ್​ನಲ್ಲಿ ಜನಿಸಿದ ಲ್ಯಾರಿ ಟೆಸ್ಲರ್​ ಸ್ಟ್ಯಾನ್​ಫೋರ್ಡ್​ನಲ್ಲಿ ಕಂಪ್ಯೂಟರ್​ ಅಧ್ಯಯನ ಮಾಡಿದ್ದರು. 1973ರಲ್ಲಿ ಜೆರಾಕ್ಸ್‌ನ ಪಾಲೊ ಆಲ್ಟೊ ರಿಸರ್ಚ್ ಸೆಂಟರ್ (ಪಿಎಆರ್​ಸಿ) ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಅಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿಯೇ ಈ ಕಟ್​, ಕಾಪಿ ಪೇಸ್ಟ್​ನ್ನ ಕಂಡುಹಿಡಿದರು. ಅವರು ಅಂದು ಕಂಡುಹಿಡಿದ ಕಟ್​, ಕಾಪಿ, ಪೇಸ್ಟ್​ ಇದೀಗ ಪ್ರಪಂಚದಾದ್ಯಂತ ಬಹುಪಯೋಗಿ ಸೌಲಭ್ಯವಾಗಿ ಹರಡಿಕೊಂಡಿದೆ.

ಜೆರಾಕ್ಸ್​ ಕಂಪೆನಿಯಲ್ಲಿ ಕಟ್, ಕಾಪಿ, ಪೇಸ್ಟ್​ ಕಂಡುಹಿಡಿದ ಲ್ಯಾರಿ ಟೆಸ್ಲರ್​ 1980ರಲ್ಲಿ ಆ್ಯಪಲ್​ ಸಂಸ್ಥೆಯನ್ನು ಸೇರಿಕೊಳ್ಳುತ್ತಾರೆ. ಆ್ಯಪಲ್​ ಸಂಸ್ಥೆಯಲ್ಲಿ ಆ್ಯಪಲ್​ ಕಂಪ್ಯೂಟರ್​ಗಳ ಬಗ್ಗೆ ಉತ್ತಮ ತಿಳಿವಳಿಕೆಯನ್ನು ಇವರು ಉಲ್ಲೇಖಿಸಿದ್ದಾರೆ. ಲಿಸಾ ಮತ್ತು ಇತರೆ ಆ್ಯಪಲ್​ ಕಂಪ್ಯೂಟರ್​ಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಇವರ ಸಹಕಾರ ಹೆಚ್ಚಿದೆ. ಆ್ಯಪಲ್​ ಸಂಸ್ಥೆಯನ್ನು ತ್ಯಜಿಸಿದ ಲ್ಯಾರಿ 2001ರಿಂದ 2005ರವರೆಗೆ ಅಮೇಜಾನ್​ ಕಂಪನಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಅದಾದ ನಂತರ ಯಾಹೂದಲ್ಲಿಯೂ ಕೂಡ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು 2008ರಲ್ಲಿ ವೃತ್ತಿ ಜೀವನದಿಂದ ದೂರ ಸರಿದಿದ್ದರು. 2009ರಿಂದ ಸ್ವತಂತ್ರ ಸಲಹಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net