ಭಾಷೆ ಎಂಬುದು ಸಂಸ್ಕೃತಿಯ ನೆಲೆ: ಪ್ರೊ.ಚೆನ್ನಿ

sep
ಎಸ್‌ಇಪಿ ಕುರಿತ ಕನ್ನಡ ಪಠ್ಯ ಪುಸ್ತಕ ರಚನಾ ಕಾರ್ಯಾಗಾರವನ್ನು ಪ್ರೊ.ಶಿವಾನಂದ ಕೆಳಗಿನಮನಿ ಉದ್ಘಾಟಿಸಿದರು. ಪ್ರೊ.ರಾಜೇಂದ್ರ ಚೆನ್ನಿ, ಪ್ರೊ.ಸಬಿತಾ ಬನ್ನಾಡಿ, ಮುತ್ತಯ್ಯ, ಪ್ರೊ.ಬಿ.ಚನ್ನೇಶ್ ಮುಂತಾದವರಿದ್ದರು.
Published on

ಶಿವಮೊಗ್ಗ: ಭಾಷೆ ಎಂಬುದು ಜ್ಞಾನ ಅಥವಾ ಸಂವಹನ ಮಾತ್ರವಲ್ಲ, ಅದು ಸಂಸ್ಕೃತಿಯ ನೆಲೆ. ಸಾಮಾಜಿಕ ವಿಜ್ಞಾನ ತಿಳುವಳಿಕೆ ಪರಂಪರೆ ಹಾಗೂ ಪ್ರಜ್ಞೆಯನ್ನು ವಿಸ್ತರಿಸುವ ಕೆಲಸವನ್ನು ಭಾಷೆ ಮಾಡುತ್ತದೆ ಎಂದು ರಾಜ್ಯ ಶಿಕ್ಷಣ ನೀತಿ ಪರಿಷತ್ ಸದಸ್ಯ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.

ಕುವೆಂಪು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ವೇದಿಕೆಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಎಸ್‌ಇಪಿ (ರಾಜ್ಯ ಶಿಕ್ಷಣ ನೀತಿ) ಕುರಿತ ಕನ್ನಡ ಪಠ್ಯ ಪುಸ್ತಕ ರಚನಾ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಭಾಷೆಯ ನಿರ್ವಚನದ ಚೌಕಟ್ಟನ್ನು ಬಿಡಿಸಬೇಕಾಗಿದೆ ಎಂದರು.
ಪಠ್ಯ ರಚನೆ ವಿವಿಯ ಆದ್ಯತೆಯಾದರೂ ಅದು ರಚನೆಯಾಗಬೇಕಾದರೆ ಕೇವಲ ಆದೇಶ ರೂಪದಲ್ಲಿ ಮಾತ್ರವಲ್ಲದೆ ಪ್ರಾತಿನಿಧ್ಯದ ರೂಪದಲ್ಲಿಯೂ ಇರಬೇಕಾಗುತ್ತದೆ. ಭಾಷೆ ಕೇವಲ ಮಾಧ್ಯಮವಲ್ಲ.ಅದು ಅನ್ನ ಕೊಡುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಕುವೆಂಪು ವಿವಿ ಕನ್ನಡ ಅಧ್ಯಾಪಕ ಪ್ರೊ.ಎ.ಬಿ.ಉಮೇಶ್ ಮಾತನಾಡಿ, ಭಾಷೆಯ ಜತೆಗೆ ಬದುಕನ್ನು ತಲೆಮಾರಿನಿಂದ ತಲೆಮಾರಿಗೆ ಪಠ್ಯಗಳ ಮೂಲಕ ದಾಟಿಸುವ ಕೆಲಸವನ್ನು ಕನ್ನಡ ವೇದಿಕೆ ಮಾಡುತ್ತಿದೆ. ಹಿರಿ-ಕಿರಿಯರನ್ನು ಒಳಗೊಂಡಂತೆ ಹೊಸ ಪಠ್ಯ ಕ್ರಮ ರೂಪಿಸಬೇಕಾಗಿದೆ ಎಂದರು.
ಎನ್‌ಇಪಿ ವ್ಯವಸ್ಥೆಯಲ್ಲಿ ಸಾಕಷ್ಟು ಗೊಂದಲಗಳಿದ್ದು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಎಸ್‌ಇಪಿ ಬಂದಿದೆ. ಇದು ಸ್ವಾಗತರ್ಹ ಕೂಡ. ಹೊಸ ರಾಜ್ಯ ಶಿಕ್ಷಣ ನೀತಿಯ ಆಶಯಗಳಿಗೆ ಅನುಗುಣವಾಗಿ ಕನ್ನಡ ಭಾಷೆ ಮತ್ತು ಐಚ್ಛಿಕ ವಿಷಯಗಳಿಗೆ ಪಠ್ಯಗಳನ್ನು ರೂಪಿಸಬೇಕಾದ ಹೊಣೆ ನಮ್ಮ ಮೇಲಿದೆ. ಇದು ವಿದ್ಯಾರ್ಥಿ ಸ್ನೇಹಿಯಾಗಬೇಕು ಎಂದು ಹೇಳಿದರು.
ಕುವೆಂಪು ವಿವಿ ಸ್ನಾತಕ ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ ಪ್ರೊ.ಶಿವಾನಂದ ಕೆಳಗಿನಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಸ್‌ಇಪಿ ಪಠ್ಯಕ್ರಮ ಚೌಕಟ್ಟಿನ ಹಿನ್ನಲೆಯಲ್ಲಿ ಪಠ್ಯಗಳನ್ನು ರೂಪಿಸಲು ಸಂಪಾದಕರನ್ನು ಆಯ್ಕೆ ಮಾಡುವಾಗ ಪಾರದರ್ಶಕತೆಯನ್ನು ಕಾಪಾಡಬೇಕು. ಪರಿಣಿತಿ ಪಡೆದ ಅಧ್ಯಾಪಕರನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ.ಬಿ.ಚನ್ನೇಶ್ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿವಿ ಕನ್ನಡ ಅಧ್ಯಾಪಕರ ವೇದಿಕೆ ಅಧ್ಯಕ್ಷೆ ಪ್ರೊ.ಸಬಿತಾ ಬನ್ನಾಡಿ, ಕಾರ್ಯದರ್ಶಿ ಮುತ್ತಯ್ಯ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net