

ಇದು ಯಾವುದೋ ಒಂದು ಚಿತ್ರದ ಶೂಟಿಂಗ್ ಅಲ್ಲ. ನಾರ್ವೆಯಲ್ಲಿ ನಡೆದ ಮನಕಲುಕುವಂಥ ಘಟನೆ. ನಾರ್ವೆಯಲ್ಲಿ ಭೀಕರ ಭೂ ಕುಸಿತದಿಂದಾಗಿ ಭೂಮಿಯ ತುಂಡೊಂದು ನೋಡ ನೋಡುತ್ತಿದ್ದಂತೆಯೇ ಜಾರುತ್ತ ಸಾಗಿ ಕ್ಷಣಾರ್ಧದಲ್ಲೇ ಹಲವು ಪುಟ್ಟ ಪುಟ್ಟ ಸುಂದರ ಮನೆಗಳ ಸಮೇತ ಸಮುದ್ರದೊಡಲು ಸೇರುತ್ತದೆ.
ಉತ್ತರ ನಾವೇಯಲ್ಲಿ ಭೂಕುಸಿತ ಉಂಟಾಗಿದೆ. ಹಲವು ಮನೆಗಳನ್ನು ಸಮುದ್ರ ನುಂಗುತ್ತಿರುವ ದೃಶ್ಯವನ್ನು ನಾರ್ವೇಯ ಅಲ್ಟಾ ನಿವಾಸಿಯೊಬ್ಬರು ಸೆರೆ ಹಿಡಿದಿದ್ದಾರೆ. ಜಾನ್ ಫ್ರೆಡ್ರಿಕ್ ಡ್ರಾಬ್ಲಾಸ್ಟ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಾರ್ವೇಯ ಅಲ್ಟಾದಲ್ಲಿ ಸಂಭವಿಸಿದ ಬೃಹತ್ ಭೂಕುಸಿತದಿಂದಾಗಿ ಮನೆಗಳು ಸಮುದ್ರದ ಪಾಲಾಗಿವೆ ಎಂದು ಈ ದೃಶ್ಯಾವಳಿಗೆ ಶೀರ್ಷಿಕೆ ಬರೆದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಲಕ್ಷಕ್ಕೂ ಹೆಚ್ಚು ಸಲ ವೀಕ್ಷಿಸಲ್ಪಟ್ಟಿದೆ. ಈ ಭಯಾನಕ ದೃಶ್ಯ ನೋಡಿ ನೆಟ್ಟಿಗರು ಅಚ್ಚರಿ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ.