

ಉಡುಪಿ: ಮಣಿಪಾಲ ಸಿಂಡಿಕೇಟ್ ಸರ್ಕಲ್ ಬಳಿ ಇರುವ ಬಹುಮಹಡಿ ಕಟ್ಟಡದ ಸಮೀಪ ಭೂಕುಸಿತ ಉಂಟಾಗಿದ್ದು, ಸ್ಥಳೀಯರನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಉಡುಪಿಯಲ್ಲಿ ಕಳೆದ 3-4 ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ತೇವಾಂಶ ಹೆಚ್ಚಾಗಿರುವ ಕಾರಣ ಈ ಭೂಕುಸಿತ ಉಂಟಾಗಿದೆ ಎಂದು ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 169ಎ ಸಮೀಪದಲ್ಲಿರುವ 10 ಮಹಡಿಗಳ ಈ ಕಟ್ಟಡದಲ್ಲಿ 32 ಮನೆಗಳಿದ್ದು, 22 ಕುಟುಂಬಗಳು ವಾಸವಾಗಿವೆ. ಕೆಳ ಮಹಡಿಯಲ್ಲಿ ಫಿಜಾ ಅಂಗಡಿಗಳಿದ್ದು, ಬಂದ್ ಮಾಡಿಸಲಾಗಿದೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಹಿನ್ನಲೆಯಲ್ಲಿ ಮನೆಗಳಲ್ಲಿ ವಾಸವಾಗಿರುವವರನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದೆ.
ಸ್ಥಳಕ್ಕೆ ಕುಂದಾಪುರ ಎಸಿ ರಾಜು, ಪೌರಾಯುಕ್ತ ಆನಂದ ಕಲ್ಲೋಳಿಕರ್, ಜಿಪಂ ಅಧ್ಯಕ್ಷ ದಿನಕರ ಬಾಬು ಭೇಟಿ ನೀಡಿದ್ದಾರೆ.