

ವಿರಾಜಪೇಟೆ: ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಭಾರಿ ಪ್ರಮಾಣದ ಭೂ ಕುಸಿತವಾಗಿದ್ದು ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ.
ವಿರಾಜಪೇಟೆ ಹೋಬಳಿಯ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಪಾಲಂಗಾಲ ಗ್ರಾಮದ ಸ.ನಂ 171/112 ರಲ್ಲಿ ಈ ಭೂಕುಸಿತ ಸಂಭವಿಸಿದೆ. 341 ಎಕರೆ ಅರಣ್ಯ ಪ್ರದೇಶದ ಕೊಡಗು ಮತ್ತು ಕೇರಳ ಗಡಿ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಎತ್ತರದ ಪ್ರದೇಶದಿಂದ ಕುಸಿತ ಸಂಭವಿಸಿ, ನೂರಾರು ಮೀಟರ್‌ಗಳ ಉದ್ದಕ್ಕೆ ಸಾಗಿದೆ. ಅರಣ್ಯ ಪ್ರದೇಶದೊಳಗೆ ವ್ಯಾಪ್ತಿ ಇದ್ದುದ್ದರಿಂದ ಹೆಚ್ಚಿನ ಹಾನಿಯಾಗಿಲ್ಲ.
ಈ ಭೂಕುಸಿತ ಜಾಗದಿಂದ ಅಂದಾಜು 15 ಕಿ.ಮೀ. ವ್ಯಾಪ್ತಿಯಲ್ಲಿ ಜನವಸತಿ ಕೂಡ ಇರುವುದಿಲ್ಲ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದು ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಒಂದು ವಾರದ ಹಿಂದೆಯೇ ಭೂಕುಸಿತ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ.