ಭೂ ಮಾಪನ ಇಲಾಖೆ 6 ಮಂದಿ ಅಮಾನತು

TKE doc
ಸರ್ಕಾರದ ಆದೇಶ ಪ್ರತಿ.
Published on

ತರೀಕೆರೆ: ಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್‌ಆರ್) ಸೇರಿ 6 ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಭೂ ಮಾಪನ ಇಲಾಖೆ ಆಯುಕ್ತರು ಅಮಾನತುಗೊಳಿಸಿದ್ದಾರೆ. ಇದರಲ್ಲಿ ನಿವೃತ್ತಿಗೆ ಒಂದು ದಿನ ಬಾಕಿ ಇರುವ ಪ್ರಭಾರ ಸಹಾಯಕ ನಿರ್ದೇಶಕ ಕೂಡ ಅಮಾನತಾಗಿದ್ದಾರೆ.

ಭೂ ಮಾಪನ ಇಲಾಖೆ ಆಯುಕ್ತರು ಮೇ 30ರಂದು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ತರೀಕೆರೆ ಭೂ ದಾಖಲೆಗಳ ಪ್ರಭಾರ ಸಹಾಯಕ ನಿರ್ದೇಶಕ ಕೆ.ಆರ್.ಪ್ರಕಾಶ್, ಪರ್ಯಾವೇಕ್ಷಕ ಜಿ.ಆರ್.ಅಶೋಕ್, ಭೂ ಮಾಪಕರಾದ ಸಿ.ಸಿ.ರಂಗನಾಥ್, ಸಿದ್ದೇಶ್, ಕೆ.ಯಶ್ವಸಿನಿ ಮತ್ತು ರುಫ್ಸಾನಾ(ಸದ್ಯ ಶಿಕಾರಿಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ) ಅಮಾನತುಗೊಂಡಿದ್ದಾರೆ. ಕೆ.ಆರ್.ಪ್ರಕಾಶ್ ಮೇ 31ರಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು.
ಎಚ್.ರಂಗಾಪುರ ಸರ್ವೇ ನಂ 11ರ ಆರ್‌ಟಿಸಿಯನ್ನು ಟಿಪ್ಪಣಿ ಮತ್ತು ಆಕಾರ್‌ಬಂದ್ ದಾಖಲೆಯಂತೆ ಇಂಡೀಕರಿಸಿ ಕೊಡುವಂತೆ ಪುಟ್ಟಪ್ಪ ಎಂಬುವರು 205ರ ನಕಲು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಭೂ ಮಾಪಕರು ಖೊಟ್ಟಿ ದಾಖಲೆ ಸೃಷ್ಟಿಸಿ ಅಭಿಲೇಖಾಲಯದಲ್ಲಿ ಗ್ರಾಮದ ದಪ್ತರ್‌ನ ಬಾಬ್ತಿನಂತೆ ಯಾವುದೇ ದಾಖಲೆಗಳಿಲ್ಲದಿದ್ದರೂ, ಹೊಸ ಸ.ನಂ 205 ಎಂದು ಎಲ್‌ಆರ್ ಟಿಪ್ಪಣಿ, ಎಲ್‌ಆರ್ ಪಕ್ಕಾ ಹಾಗೂ ಆಕಾರ್‌ಬಂದ್‌ಗಳಂಥ ಮಹತ್ವದ ದಾಖಲೆ ನಿಯಮ ಬಾಹಿರವಾಗಿ ತಯಾರಿಸಿದ್ದರು.
ಖೊಟ್ಟಿ ದಾಖಲೆಗಳನ್ನು ಪರ್ಯಾವೇಕ್ಷಕರಿಂದ ದೃಢೀಕರಿಸಿ ಪುಟ್ಟಪ್ಪ ಎಂಬುವವರಿಗೆ ವಿತರಿಸಿದ್ದಲ್ಲದೆ, ಕಚೇರಿಯಲ್ಲಿ ಭೂ ಮಂಜೂರಾತಿ ಕಡತ ಲಭ್ಯವಿದ್ದರೂ ಮೂಲ ಕಡತ ಪರಿಶೀಲಿಸದೆ ವೈಯಕ್ತಿಕ ಹಿತಾಸಕ್ತಿಗಾಗಿ ಕರ್ತವ್ಯ ನಿರ್ವಹಿಸಲಾಗಿದೆ. ಭೂ ಮಾಪಕಿ ಕೆ.ಯಶಸ್ವಿನಿ, ಚಿಕ್ಕಾತೂರು ಗ್ರಾಮದ ಸ.ನಂ. 181/1 ರಿಂದ 4 ರವರೆಗೆ ಕರ್ತವ್ಯ ಲೋಪ ಎಸಗಿರುವುದು ಸ್ಪಷ್ಟವಾಗಿದೆ. ಭೂ ಮಾಪಕರಾದ ಕೆ.ಸಿದ್ದೇಶಿ, ರುಫ್ಸಾನಾ ಮತ್ತು ಪರ್ಯಾವೇಕ್ಷಕ ಜಿ.ಆರ್.ಅಶೋಕ್ ಅವರನ್ನು ನಕಲಿ ದಾಖಲೆ ಸೃಜಿಸಿದ ಕಾರಣಕ್ಕೆ ಅಮಾನತುಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ದೊಡ್ಡ ಕುಂದೂರು ಗ್ರಾಮದ ಸ.ನಂ 142 ರಲ್ಲಿ 3.20 ಎಕರೆ ಜಮೀನು, 143 ರಲ್ಲಿ 4.38 ಎಕರೆ ಜಮೀನಿಗೆ ಯಾವುದೇ ಪೋಡಿ, ದುರಸ್ತಿ ಮಾಡದೆ ಖೊಟ್ಟಿ ಆಕಾರಬಂದ್, ಟಿಪ್ಪಣಿ ಪ್ರತಿ ಪರಿಶೀಲಿಸದೆ ನಕಲಿ ದಾಖಲೆಗಳ ಆಧಾರದ ಮೇಲೆ ಭೂಮಿ ವರ್ಗಾಯಿಸಿರುವ ಮತ್ತೊಂದು ಪ್ರಕರಣದಲ್ಲಿ ಉಪ ವಿಭಾಗಾಧಿಕಾರಿ ಡಾ. ಕೆ.ಜೆ.ಕಾಂತರಾಜ್, ಭೂ ಮಾಪನ ಇಲಾಖೆ ಪರ್ಯಾವೇಕ್ಷಕ ಜಿ.ಆರ್.ಅಶೋಕ್, ಭೂ ದಾಖಲೆಗಳ ಪ್ರಭಾರ ಸಹಾಯಕ ನಿರ್ದೇಶಕ ಕೆ.ಆರ್.ಪ್ರಕಾಶ್, ಗ್ರಾಮ ಆಡಳಿತಾಧಿಕಾರಿ ಸಿದ್ದಪ್ಪ, ರಾಜಸ್ವ ನಿರೀಕ್ಷಕರಾದ ಶಿವಕುಮಾರ್ ಮತ್ತು ಗಿರೀಶ್, ದ್ವಿತೀಯ ದರ್ಜೆ ಸಹಾಯಕಿ ದಿವ್ಯಾ, ಶಿರಸ್ತೇದಾರ್ ನಾಗೇಂದ್ರ ನಾಯ್ಕ, ಹಾಲಿ ತಹಸೀಲ್ದಾರ್ ವಿ.ಎಸ್.ರಾಜೀವ್, ಹಿಂದಿನ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತರೀಕೆರೆ ಈ ಹಿಂದಿನ ಎಸಿ ಎಸ್.ಸಿದ್ದಲಿಂಗ ರೆಡ್ಡಿ (ಸದ್ಯ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ)ವಿರುದ್ಧ ಜಂಟಿ ಇಲಾಖಾ ವಿಚಾರಣೆಗೆ ಆದೇಶಿಸಿದೆ. ಅಷ್ಟೇ ಅಲ್ಲದೆ ಮೇ 31ರಂದು ನೋಟಿಸ್ ಜಾರಿಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net