

ಸಿಂಧನೂರು: ಹಳೆಯ ದಾಖಲೆಗಳನ್ನು ಶಾಶ್ವತವಾಗಿ ಡಿಜಿಟಲ್ ರೂಪದಲ್ಲಿ ಉಳಿಸಿಕೊಳ್ಳಲು, ನಕಲಿ ದಾಖಲೆಗಳ ಸೃಷ್ಟಿಯನ್ನು ತಡೆಗಟ್ಟಿ, ಜನರಿಗೆ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಭೂ ಸುರಕ್ಷಾ ಯೋಜನೆಯಿಂದ 30 ಸಾವಿರ ಹಳೇ ಕಡತ, 3,500 ವಹಿ ರಕ್ಷಣೆಯಾಗಲಿದ್ದು ಈ ಕಾರ್ಯ ತಾಲೂಕಿನಲ್ಲಿ ಚುರುಕಿನಿಂದ ನಡೆದಿದೆ.
ಫೆಬ್ರವರಿ ಮೊದಲ ಹಂತದಲ್ಲಿ ರಾಜ್ಯದಲ್ಲಿ ಕೆಲ ತಾಲೂಕುಗಳನ್ನು ಪೈಲೆಟ್ ಕಚೇರಿಯಾಗಿ ಆಯ್ಕೆ ಮಾಡಿಕೊಂಡಿದ್ದು ಈಗ ಎರಡನೇ ಹಂತದಲ್ಲಿ ಸಿಂಧನೂರು ತಾಲೂಕು ಸೇರ್ಪಡೆಗೊಂಡಿದೆ. ಈ ಯೋಜನೆಯಡಿ ತಾಲೂಕು ಕಚೇರಿಯ ಅಭಿಲೇಖಾಲಯಗಳಲ್ಲಿರುವ ಅತ್ಯಂತ ಪ್ರಮುಖವಾದ, ಹಳೆಯ ಮತ್ತು ಬಹಳ ಹಿಂದಿನ ಅವಧಿಯ ಭೂ ದಾಖಲೆಗಳನ್ನು ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕ್ಯಾನಿಂಗ್ ಮತ್ತು ಅಪ್ ಲೋಡಿಂಗ್ ಮಾಡಿ ಗಣಕೀಕರಣಗೊಳಿಸುವ ಕಾರ್ಯ ಚುರಕುಗೊಂಡಿದ್ದು ಹಳೇ ಕಡತಗಳಿರುವ ರೇಕಾರ್ಡ್ ರೂಮ್ ಸಿದ್ಧಗೊಳಿಸಲಾಗಿದೆ. ಅಲ್ಲಿಯೇ ಹಳೇ ಕಡತ ಡಿಜಿಟಲೀಕರಣಗೊಳ್ಳಲಿದೆ.
ಡಿಜಿಟಲೀಕರಣದಿಂದ ಅಭಿಲೇಖಾಲಯದ ಸಿಬ್ಬಂದಿಯನ್ನು ಸಂಪರ್ಕಿಸಿ ದಾಖಲೆಗಳನ್ನು ಪಡೆಯುವುದು ತಪ್ಪುತ್ತದೆ. ಜತೆಗೆ ದಾಖಲೆಗಳ ವ್ಯತ್ಯಾಸ, ರೆಕಾರ್ಡ್ ಮಿಸ್ಸಿಂಗ್, ವಿಳಂಬ ಎಲ್ಲ ಸಮಸ್ಯೆಗಳು ಪರಿಹಾರ ಆಗಲಿದ್ದು, ನಾಗರಿಕರು ದಾಖಲೆಗಳಿಗಾಗಿ ಕಚೇರಿಗೆ ಭೇಟಿ ನೀಡುವ ಬದಲು ಸುಲಭವಾಗಿ ಆನ್ ಲೈನ್ ಮೂಲಕ ದಾಖಲೆಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಸಾರ್ವಜನಿಕರಿಗೆ ಶೀಘ್ರ ಲಭ್ಯ: ಕಂದಾಯ ದಾಖಲೆಗಳ ಗಣಕೀಕರಣ ತಂತ್ರಾಂಶದಲ್ಲಿ ಕಡತ ಮತ್ತು ವಹಿಗಳ ಇಂಡೆಕ್ಸಿಂಗ್, ಕ್ಯಾಟಲಾಗಿಂಗ್, ಸ್ಕ್ಯಾನಿಂಗ್ ಮತ್ತು ಅಪ್ ಲೋಡ್ ಮಾಡುವಂಥ ಚಟುವಟಿಕೆಗಳನ್ನು ಒಳಗೊಂಡಿದೆ. ಕಚೇರಿ ಟಿಪ್ಪಣಿಗಳು, ಆದೇಶಗಳು, ಸುತ್ತೋಲೆಗಳು, ನಡಾವಳಿಗಳು ಮುಂತಾದ ವಿವಿಧ ರೀತಿಯ ದಾಖಲೆಗಳನ್ನು ಪ್ರತ್ಯೇಕವಾಗಿ ಸ್ಕ್ಯಾನ್ ಮಾಡಿ, ಸೂಕ್ತವಾದ ಕೀವಲ್ಡ್‌ಗಳೊಂದಿಗೆ ಟ್ಯಾಗ್ ಮಾಡಿ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ತಾಲೂಕು ಕಚೇರಿಯಲ್ಲಿ ಅಭಿಲೇಖಾಲಯಗಳ ಗಣಕೀಕರಣ ಕಾರ್ಯವನ್ನು ಪ್ರಾರಂಭಿಸಲಾಗಿದೆ. ಈ ಪೈಲೆಟ್ ಕಚೇರಿಗೆ 6 ಕಂಪ್ಯೂಟರ್, 3 ಸ್ಕ್ಯಾನರ್ ಮತ್ತು 6 ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಒದಗಿಸಲಾಗಿದೆ.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಹತ್ವಾಕಾಂಕ್ಷೆಯ ಭೂಸುರಕ್ಷಾ ಯೋಜನೆಯನ್ನು ಜ.8 ರಂದು ಅನುಷ್ಠಾನಗೊಳಿಸಿದ್ದು 30 ಸಾವಿರ ಕಡತ ಹಾಗೂ 3,500 ವಹಿಗಳು ಸ್ಕ್ಯಾನಿಂಗ್ ನಡೆಯಲಿದೆ. ಈಗಾಗಲೇ ರೇಕಾರ್ಡ್ ರೂಮ್ ಸಿದ್ಧಗೊಳಿಸಿದ್ದು ಕಂಪ್ಯೂಟರ್, ಸ್ಕ್ಯಾನರ್ ಹಾಗೂ ಡೇಟಾ ಎಂಟ್ರಿ ಆಪರೇಟರ್ ಒದಗಿಸಲಾಗಿದೆ. 6 ತಿಂಗಳು ಸಮಯಾವಕಾಶ ಬೇಕಾಗಲಿದೆ. ಅರುಣ್ ದೇಸಾಯಿ ತಹಸೀಲ್ದಾರ್, ಸಿಂಧನೂರು. ಸರ್ಕಾರ ಇಂಥದ್ದೊಂದು ಮಹತ್ವಕಾಂಕ್ಷೆಯ ಯೋಜನೆ ಜಾರಿಗೊಳಿಸಿರುವುದು ಸ್ವಾಗತಾರ್ಹವಾಗಿದೆ. ಹಳೇ ದಾಖಲಾತಿಗಳು ರಕ್ಷಣೆ ಜತೆಗೆ, ಜನರು ಯಾವಾಗ ಬೇಕಾದರೂ ತಮ್ಮ ದಾಖಲಾತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಕಚೇರಿಗೆ ಅಲೆದಾಟ, ಸಮಯ ಉಳಿಯಲಿದೆ. ಈ ಕೆಲಸ ತುರ್ತಾಗಿ ನಡೆದರೆ ಹೆಚ್ಚಿನ ಅನುಕೂಲವಾಗಲಿದೆ. ಬಸವಂತರಾಯಗೌಡ ಕಲ್ಲೂರು ರೈತ ಪ್ರಮುಖ, ಸಿಂಧನೂರು.