

ಶಿವಮೊಗ್ಗ: ಭೂ ವಿದ್ಯಾದಾನದ ಶಾಲಾ ಜಮೀನುಗಳನ್ನು ಸಾಗುವಳಿ ಗೇಣಿದಾರರಿಗೆ ಹಕ್ಕುಪತ್ರ ನೀಡುವ ಕುರಿತಂತೆ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಸಂಬಂಧಿಸಿ ಕಂದಾಯ ಮತ್ತು ಶಿಕ್ಷಣಾಧಿಕಾರಿಗಳಿಗೆ ಕಾನೂನು ರಚಿಸಲು ಸೂಚಿಸಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನಿರ್ಧಾರ ಸ್ವಾಗತಾರ್ಹ ಎಂದು ರಾಜ್ಯ ಭೂ ವಿದ್ಯಾದಾನದ ಶಾಲಾ ಜಮೀನು ಗೇಣಿದಾರರ ಹೋರಾಟ ಸಮಿತಿ ಅಧ್ಯಕ್ಷ ಕಲ್ಲೂರು ಮೇಘರಾಜ್ ಹೇಳಿದರು.
ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾಗಿ ಶಾಲಾ ಗೇಣಿದಾರರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಗಿತ್ತು. 70 ವರ್ಷಗಳಿಂದ ಶಾಲಾ ಜಮೀನುಗಳನ್ನು ಗೇಣಿ ಸಾಗುವಳಿ ಮಾಡಿಕೊಂಡು ಬರುತ್ತಿರುವ ಗೇಣಿ ರೈತರಿಗೆ ಭೂ ಒಡೆತನದ ಹಕ್ಕುಪತ್ರ ನೀಡಲು ಕಾನೂನು ರಚಿಸಲು ಒತ್ತಾಯಿಸಿದ್ದೆವು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಲಾ ಜಮೀನು ಗೇಣಿದಾರರಿಗೆ ಭೂ ಒಡೆತನ ನೀಡುವ ಸಂಬಂಧ ಕಾನೂನು ರಚಿಸಿದ ತಕ್ಷಣ ಪ್ರಸ್ತಾವನೆಯನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ವಿಧಾನಸಭೆಯಲ್ಲಿ ಅಂತಿಮ ಅನುಮೋದನೆಗೆ ಮಂಡಿಸುವುದಾಗಿ, ಜತೆಗೆ ವಿಧಾನಸಭೆಯಲ್ಲಿ ರಾಜ್ಯ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಅನುಮೋದನೆ ದೊರೆತ ನಂತರ ರಾಜ್ಯ ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ ಎಂದರು.
ಕೆಂಗಲ್ ಹನುಮಂತಯ್ಯ ಅವರು ಸಿಎಂ ಆಗಿದ್ದ ವೇಳೆ ಭೂ ವಿದ್ಯಾದಾನ ಚಳವಳಿಯನ್ನು ಆರಂಭಿಸಿದಾಗ ರಾಜ್ಯಾದ್ಯಂತ 10 ಸಾವಿರಕ್ಕೂ ಅಧಿಕ ಎಕರೆ ಜಮೀನು ವಿವಿಧ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಾನವಾಗಿ ನೀಡಲ್ಪಟ್ಟಿದ್ದವು. ಈ ಶಾಲಾ ಜಮೀನುಗಳಲ್ಲಿ ಬಹುಭಾಗ ಸಣ್ಣ ಮತ್ತು ಅತಿ ಸಣ್ಣ ರೈತರು ಗೇಣಿ ಸಾಗುವಳಿ ಮಾಡಿಕೊಂಡು ಆ ಶಾಲೆಗಳಿಗೆ ಗೇಣಿ ಹಣ ಕಟ್ಟುತ್ತಿದ್ದಾರೆ. ಈ ಶಾಲಾ ಜಮೀನುಗಳ ಖಾತೆ ಈಗಲೂ ಸಂವಿಧಾನ ವಿರೋಧಿಯಾಗಿ ರಾಜ ಪ್ರಮುಖ(ರಾಜ್ಯಪಾಲ)ರ ಹೆಸರಿಗೆ ದಾಖಲಾಗುತ್ತಿದೆ. 25 ವರ್ಷಗಳಿಂದ ಭೂ ಒಡೆತನದ ಹಕ್ಕುಪತ್ರ ಒದಗಿಸುವಂತೆ ನಿರಂತರ ಹೋರಾಟ ಮಾಡುತ್ತಿರುವುದನ್ನು ಸಚಿವರ ಗಮನಕ್ಕೆ ತರಲಾಗಿತ್ತು ಎಂದು ಹೇಳಿದರು. ಸಮಿತಿ ಪ್ರಮುಖರಾದ ಎಚ್.ಎಂ.ಸಂಗಯ್ಯ, ಶಂಕ್ರಾನಾಯ್ಕಾ, ಕೋಣಂದೂರು ಚೇತನ್, ಚಂದ್ರಾ ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.