

ಬೆಂಗಳೂರು: ಭೂ ದಾಖಲೆಗಳನ್ನು ಪಡೆಯಲು ಜನರು ತಹಸೀಲ್ದಾರ್ ಕಚೇರಿಗೆ ಬರಬೇಕಿಲ್ಲ. ಮನೆಯಲ್ಲೇ ಕುಳಿತು ದೃಢೀಕೃತ ದಾಖಲೆ ಪಡೆಯಬಹುದು ಅಥವಾ ಅಟಲ್ ಜೀ ಕೇಂದ್ರಗಳಲ್ಲಿ ಸ್ವೀಕರಿಸಬಹುದು.
ಹೌದು... ಇಂತಹದೊಂದು ಜನಸ್ನೇಹಿ ಯೋಜನೆಯನ್ನು ಕಂದಾಯ ಇಲಾಖೆ ಜುಲೈ 1ರಿಂದಲೇ ಜಾರಿಗೆ ತಂದಿದೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಭೂ ಸುರಕ್ಷಾ ಮತ್ತು ಕಂದಾಯ ದಾಖಲೆಗಳ ಗ್ರಂಥಾಲಯ ಯೋಜನೆಯಲ್ಲಿ ಶತಮಾನದ ಭೂ ದಾಖಲೆಗಳನ್ನು ಸ್ಕಾೃನ್ ಮಾಡಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಎ ಮತ್ತು ಬಿ ವರ್ಗದ 100 ಕೋಟಿ ಪುಟಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ. ಪ್ರಾಯೋಗಿಕವಾಗಿ 17 ತಾಲೂಕಿನಲ್ಲಿ ಜಾರಿಗೆ ತಂದು ಪೂರ್ಣ ಮಾಡಲಾಗಿದೆ. ಪ್ರಸ್ತುತ 32.64 ಕೋಟಿ ಪುಟಗಳನ್ನು ಸ್ಕಾೃನಿಂಗ್ ಮಾಡಲಾಗಿದೆ. ಮುಂದಿನ 6 ತಿಂಗಳಲ್ಲಿ ಬಾಕಿ ಪುಟಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ ಎಂದರು.
ಸ್ಕಾೃನಿಂಗ್ ಕೆಲಸ ಪ್ರಗತಿಯಲ್ಲಿರುವ ಕಾರಣಕ್ಕೆ ತಹಸೀಲ್ದಾರ್ ಕಚೇರಿಗಳ ರೆಕಾರ್ಡ್ ರೂಮ್‌ನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸ್ವೀಕರಿಸಿ ಆನಂತರ ಸ್ಕಾೃನ್ ಮಾಡಿಕೊಡಲಾಗುತ್ತಿದೆ. ಈ ರೀತಿಯಾಗಿ 1.99 ಲಕ್ಷ ಪುಟಗಳನ್ನು ವಿತರಿಸಲಾಗಿದೆ. ಇನ್ನು ಮುಂದೆ ರೆಕಾರ್ಡ್ ರೂಮ್‌ಗೆ ಸಾರ್ವಜನಿಕರು ಬರುವ ಅಗತ್ಯವಿಲ್ಲ. ಕಂಪ್ಯೂಟರ್ ಜ್ಞಾನ ಇದ್ದರೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಸ್ವೀಕರಿಸಬಹುದು. ಇಲ್ಲವಾದರೆ, ಹತ್ತಿರದ ಅಟಲ್ ಜೀ ಕೇಂದ್ರದಲ್ಲಿ ಅರ್ಜಿ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಪಂ ಬಾಪೂಜಿ ಕೇಂದ್ರಗಳಿಗೂ ಸೇವೆ ವಿಸ್ತರಿಸುವ ಗುರಿ ಇರುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
‘ಎ’ ಮತ್ತು ‘ಬಿ’ ವರ್ಗದ ದಾಖಲೆ
ಭೂ ದಾಖಲೆಯಲ್ಲಿ ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ವರ್ಗದ ದಾಖಲೆಗಳಾಗಿ ವಿಂಗಡಣೆ ಮಾಡಲಾಗಿದೆ. ‘ಎ’ ವರ್ಗ ಎಂದರೇ ಶಾಶ್ವತ ದಾಖಲೆ ಮತ್ತು ‘ಬಿ’ ವರ್ಗದ ದಾಖಲೆ ಎಂದರೇ 30 ವರ್ಷ ಸಂಗ್ರಹಿಸುವುದು ಎಂದು ವರ್ಗೀಕರಣ ಮಾಡಲಾಗಿದೆ. ‘ಎ’ ಮತ್ತು ‘ಬಿ’ ವರ್ಗದಲ್ಲಿ ಸಾಗುವಳಿ ಚೀಟಿ, ಪಹಣಿ, ಬಗರ್ ಹುಕಂ, ಮ್ಯುಟೇಶನ್ ಮತ್ತು ಮ್ಯುಟೇಶನ್ ಎಕ್ಸ್‌ಟ್ರಾಕ್ಟ್, ಪಟ್ಟಾ, ಎಡ-ಬಲ ದಾಖಲೆಗಳು ಸೇರಿವೆ. ‘ಸಿ’ ವರ್ಗದ ದಾಖಲೆಗೆ 5 ವರ್ಷಗಳ ಆಯಸ್ಸು ಮತ್ತು ‘ಡಿ’ ವರ್ಗದ ದಾಖಲೆ 1 ವರ್ಷ ಆಯಸ್ಸು ಆಗಿರುವ ಕಾರಣಕ್ಕೆ ಈ ಎರಡೂ ವರ್ಗದ ದಾಖಲೆಗಳನ್ನು ಸದ್ಯಕ್ಕೆ ಸ್ಕಾೃನಿಂಗ್ ಮಾಡುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭೂ ಸುರಕ್ಷಾ ಯೋಜನೆ ಲಾಭ:
- ಜಮೀನು ದಾಖಲೆಗಳ ನಾಶ, ತಿದ್ದುವುದು, ನಕಲಿ ಸೃಷ್ಟಿಸಿಗೆ ಬ್ರೇಕ್
- ದಾಖಲೆ ವಿತರಿಸುವಾಗ ಲಂಚ ಸ್ವೀಕಾರ, ಕಿರುಕುಳಕ್ಕೆ ಮುಕ್ತಿ
- ಅಂಗೈಯಲ್ಲಿಯೇ ಭೂ ದಾಖಲೆ ಪಡೆಯಲು ಜನರಿಗೆ ಅನುಕೂಲ
- ಭ್ರಷ್ಟ ಅಧಿಕಾರಿ, ಸಿಬ್ಬಂದಿ, ಏಜೆಂಟ್‌ಗಳ ಹಾವಳಿಗೆ ತಡೆ
31 ಜಿಲ್ಲೆಗಳಲ್ಲಿ ಪ್ರಥಮ 10 ಜಿಲ್ಲೆಗಳ ವಿವರ
ಜಿಲ್ಲೆ ಡಿಜಿಟೈಸ್ ಪುಟಗಳ ಸಂಖ್ಯೆ
ಬೆಳಗಾವಿ 2,01,79,324
ವಿಜಯಪುರ 1,96,28,926
ಉತ್ತರ ಕನ್ನಡ 1,92,88,347
ದಕ್ಷಿಣ ಕನ್ನಡ 1,60,86,541
ತುಮಕೂರು 1,45,48,794
ಬಾಗಲಕೋಟೆ 1,37,21,729
ಹಾಸನ 1,32,39,503
ದಾವಣಗೆರೆ 1,23,45,477
ಹಾವೇರಿ 1,19,84,015
ಮೈಸೂರು 1,17,22,677
ಭೂ ದಾಖಲೆ ಸ್ವೀಕರಿಸಲು ಜನರು ತಹಸೀಲ್ದಾರ್ ಕಚೇರಿಗೆ ಅಲೆಯುವ ಪರಿಸ್ಥಿತಿ ಬೇಡ. ಸಮೀಪದ ಅಟಲ್ ಜೀ ಕೇಂದ್ರದಲ್ಲಿ ಅಥವಾ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ದೃಢೀಕರಿಸಿದ ಪ್ರತಿ ಪಡೆಯಿರಿ.
ಕೃಷ್ಣಬೈರೇಗೌಡ, ಕಂದಾಯ ಇಲಾಖೆ ಸಚಿವ