ಅಭಿವೃದ್ಧಿ ಹೆಸರಲ್ಲಿ ದೇಶ ಲೂಟಿ, ರೈತ ಸಂಘ ಆಕ್ರೋಶ

raita sanga protest
ಕಾರ್ಪೋರೇಟ್ ಕಂಪನಿಗಳು ದೇಶ ಬಿಟ್ಟು ತೊಲಗುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಎಚ್.ಆರ್.ಬಸವರಾಜಪ್ಪ, ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಕೆ.ರಾಘವೇಂದ್ರ ಇತರರಿದ್ದರು.
Published on

ಶಿವಮೊಗ್ಗ: ಕಾರ್ಪೋರೇಟ್ ಕಂಪನಿಗಳು ದೇಶ ಬಿಟ್ಟು ತೊಲಗುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಶುಕ್ರವಾರ ಶಿವಪ್ಪ ನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಅಭಿವೃದ್ಧಿ ಹೆಸರಲ್ಲಿ ರೈತರ ಲಕ್ಷಾಂತರ ಎಕರೆ ಭೂಮಿ ವಶಪಡಿಸಿಕೊಂಡು ಕಂಪನಿಗಳಿಗೆ ನೀಡಲಾಗುತ್ತಿದೆ. ಖಾಸಗೀಕರಣದ ಹೆಸರಿನಲ್ಲಿ ನೂರಾರು ಸಾರ್ವಜನಿಕ ಉದ್ದಿಮೆಗಳನ್ನು ಅಲ್ಪ ಬೆಲೆಗೆ ನೀಡಲಾಗುತ್ತಿದೆ. ಮಾಲ್ ಸಂಸ್ಕೃತಿ ಬೀದಿ ವ್ಯಾಪಾರಕ್ಕೂ ಕುತ್ತು ತರುವ ಮೂಲಕ ಸಣ್ಣ ವ್ಯಾಪಾರಸ್ಥರನ್ನು ಮುಳುಗಿಸಲಾಗುತ್ತಿದೆ ಎಂದು ದೂರಿದರು.
ಭೂ ಕಾಯ್ದೆ ತಿದ್ದುಪಡಿ ಮೂಲಕ ರೈತರ ಭೂಮಿ ದೋಚಲು ಹೊರಟಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರ ಬೆಳೆ ಮೇಲೆ ಸಂಪೂರ್ಣ ಹಿಡಿತ ಸಾಧಿಸುತ್ತಿದ್ದಾರೆ. ಕಂಪನಿಗಳ ಮೇಲಿನ ತೆರಿಗೆ ದರ ಇಳಿಸಿ ಜಿಎಸ್‌ಟಿ, ಸೆಸ್ ರೂಪದಲ್ಲಿ ಜನಸಾಮಾನ್ಯರ ಸುಲಿಗೆ ಮಾಡಲಾಗುತ್ತಿದೆ. ಅಭಿವೃದ್ಧಿ ಹೆಸರಲ್ಲಿ ದೇಶ ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕೃಷಿ ಮೇಲಿನ ಕಾರ್ಪೋರೇಟ್ ಕಂಪನಿಗಳ ಆಕ್ರಮಣ ನಿಲ್ಲಿಸಬೇಕು. ರೈತರ ಬೆಳೆಗಳಿಗೆ ಎಂಎಸ್‌ಪಿ(ಕನಿಷ್ಠ ಬೆಂಬಲ ಬೆಲೆ) ಖಾತ್ರಿ ಪಡಿಸಬೇಕು. ರೈತರ ಹಾಗೂ ಜನಸಾಮಾನ್ಯರ ಬದುಕಿಗೆ ಕಂಟಕವಾಗಿರುವ ವಿದ್ಯುತ್ ಖಾಸಗೀಕರಣ ರದ್ದುಗೊಳಿಸಬೇಕು. ಕಾರ್ಮಿಕ ವಿರೋಧಿ ನಾಲ್ಕು ಕೋಡ್‌ಗಳು ರದ್ದಾಗಬೇಕು. ಉದ್ಯೋಗ ಭದ್ರತೆ ದೇಶದ ನೀತಿಯಾಗಬೇಕಿದೆ ಎಂದು ಒತ್ತಾಯಿಸಿದರು.
ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಜ್ಞಾನೇಶ್, ಕಾರ್ಯದರ್ಶಿ ಗುರುಶಾಂತ, ಮಂಜಪ್ಪ ಕಾಚಿಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net