

ಎನ್.ಆರ್.ಪುರ: ಭೂಮಿ ಉಳುವವನೇ ಒಡೆಯ ಕಾನೂನಿನ ಮೂಲಕ ಬಡ ರೈತರಿಗೆ ದೇವರಾಜ ಅರಸು ಭೂಮಿ ಕೊಡುಗೆ ನೀಡಿದ್ದಾರೆ ಎಂದು ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ ಹೇಳಿದರು.
ಡಿ.ದೇವರಾಜ ಅರಸು ಭವನದಲ್ಲಿ ತಾಲೂಕು ಆಡಳಿತ , ತಾಪಂ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪರಿಶಿಷ್ಟರ ಧ್ವನಿಯಾಗಿದ್ದರು ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಯುವಜನರಿಗೆ ಪ್ರಜಾಪ್ರಭುತ್ವದ ಹಕ್ಕು ನೀಡಿದ ರಾಜೀವ್ ಗಾಂಧಿ ಜನ್ಮದಿನವನ್ನೂ ಆಚರಿಸಲಾಗುತ್ತ್ತಿದೆ. ಇಬ್ಬರೂ ಮಹನೀಯರ ಜೀವನ ಯುವಕರಿಗೆ ಸ್ಫ್ಪೂರ್ತಿದಾಯಕ. ದೇವರಾಜ ಅರಸು ಅವರಂತೆಯೇ ರಾಜಕೀಯದಲ್ಲಿ ನೆಲೆ ನಿಂತಿರುವ ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ರಮೇಶ್ ಮಾತನಾಡಿ, ತಾಲೂಕಿನಲ್ಲಿ 8 ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಸತಿ ನಿಲಯಗಳಿವೆ. ಅರಸು ಜನ್ಮದಿನಾಚರಣೆ ಪ್ರಯುಕ್ತ ವಸತಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪ್ರತಿಭಾವಂತ 6 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ ಎಂದರು.
ದೇವರಾಜ ಅರಸು ಜೀವನ ಚರಿತ್ರೆ ಸಾರುವ ಗೀತನೃತ್ಯ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾಬೆನ್ನಿ, ಪಪಂ ಸದಸ್ಯರಾದ ಜುಬೇದಾ, ಸೈಯದ್‌ವಸೀಂ, ಮುಕುಂದ, ದಲಿತ ಸಂಘದ ಮುಖಂಡರಾದ ಡಿ.ರಾಮು, ಶಿವಣ್ಣ, ವಾಲ್ಮೀಕಿ ಸಂಘದ ಕ್ಷೇತ್ರಾಧ್ಯಕ್ಷ ಎ.ಸಿ.ಶ್ರೀನಿವಾಸ್, ಗ್ರೇಡ್-2 ತಹಸೀಲ್ದಾರ್ ಚಂದ್ರಶೇಖರ್ ಇತರರಿದ್ದರು.