ಈ ಬಾರಿಯ ಮುಂಬೈನ ಲಾಲ್​ಬಾಗ್​ಚಾ ರಾಜಾ ಕೇವಲ 4 ಅಡಿ!

lalbaugcha ganesh pandal
Published on

ಮುಂಬೈ: ಗಣೇಶನ ಹಬ್ಬ ಬಂತೆಂದರೆ ಮಹಾರಾಷ್ಟ್ರದ ಗಲ್ಲಿ ಗಲ್ಲಿಗಳಲ್ಲೂ ಎತ್ತರೆತ್ತರದ ಗಣೇಶ ಮೂರ್ತಿಗಳನ್ನು ಕೂರಿಸಿ, ವಾರಗಟ್ಟಲೆ ಇಟ್ಟುಕೊಂಡು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಸಾಮಾನ್ಯ. ಆದರೆ, ಈ ಬಾರಿಯ ಗಣೇಶ ಹಬ್ಬದ ಮೇಲೂ ಕರೊನಾ ಕರಿನೆರಳು ಬಿದ್ದಿರುವ ಕಾರಣ, ಮಹಾರಾಷ್ಟ್ರದ ಗಣೇಶ ಪೆಂಡಾಲ್​ಗಳ ಮೂರ್ತಿಗಳ ಎತ್ತರ ಗಣನೀಯವಾಗಿ ಕಡಿಮೆಯಾಗುವುದು ನಿಶ್ಚಿತವಾಗಿದೆ.

ಇದಕ್ಕೆ ಪೂರಕ ಎಂಬಂತೆ ಮುಂಬೈನಲ್ಲೇ ಅತಿಎತ್ತರದ ಮೂರ್ತಿ ಎನಿಸಿಕೊಳ್ಳುತ್ತಿದ್ದ ಲಾಲ್​ಬಾಗ್​ಚಾ ರಾಜಾ ಗಣೇಶ ಮೂರ್ತಿ ಈ ಬಾರಿ ಕೇವಲ 4 ಅಡಿ ಎತ್ತರ ಇರಲಿದೆ.

ಲಾಲ್​ಬಾಗ್​ನ ಗಣೇಶ ಗಲ್ಲಿಯ ಮುಂಬೈಚಾ ರಾಜಾ ಮಂಡಳದ ಕಾರ್ಯದರ್ಶಿ ಸ್ವಪ್ನಿಲ್​ ಪಾರಬ್​ ಈ ಬಾರಿಯ ಗಣೇಶ ಹಬ್ಬ ತುಂಬಾ ಸಣ್ಣ ಮಟ್ಟದಲ್ಲಿ ಆಚರಿಸಲ್ಪಡುತ್ತದೆ ಎಂದು ಹೇಳಿದ್ದಾರೆ.

ಲಾಲ್​ಬಾಗ್​ಚಾ ಮಂಡಳ ಇಡೀ ಮುಂಬೈನಲ್ಲೇ ತುಂಬಾ ಪ್ರಸಿದ್ಧವಾದದ್ದು. ಬಾಲಿವುಡ್​ ತಾರೆಯರು, ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು, ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತಿತರ ಪ್ರತಿಷ್ಠಿತರು ಈ ಪೆಂಡಾಲ್​ಗೆ ಭೇಟಿ ನೀಡಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ರಾಜ್ಯದಲ್ಲಿ ಕರೊನಾ ಪಿಡುಗು ಜೋರಾಗಿರುವ ಕಾರಣ ಈ ಬಾರಿ ಕಡಿಮೆ ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತೆ ಎಲ್ಲ ಪೆಂಡಾಲ್​ಗಳಿಗೆ ಸಿಎಂ ಉದ್ಧವ್​ ಠಾಕ್ರೆ ಮನವಿ ಮಾಡಿಕೊಂಡಿದ್ದಾರೆ. ಎಲ್ಲ ಪೆಂಡಾಲ್​ನವರೂ ಇದಕ್ಕೆ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಮೂರ್ತಿ ವಿಸರ್ಜನೆಗಾಗಿ ಮುಂಬೈನ ಸಮುದ್ರ ತೀರದವರೆಗೆ ಬೃಹತ್​ ಮೆರವಣಿಗೆ ನಡೆಸುವುದು ಸಾಮಾನ್ಯ. ಆದರೆ, ಈ ಬಾರಿ ಕೋವಿಡ್​ ಪಿಡುಗು ಹಿನ್ನೆಲೆಯಲ್ಲಿ ಬಿಎಂಸಿ ವತಿಯಿಂದ ಕೃತಕ ಕೊಳಗಳನ್ನು ನಿರ್ಮಿಸಿ, ಅವುಗಳಲ್ಲೇ ಮೂರ್ತಿಗಳನ್ನು ವಿಸರ್ಜಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಪೆಂಡಾಲ್​ಗಳ ಗಣೇಶ ಮೂರ್ತಿಯ ಎತ್ತರ ಕಡಿಮೆಯಾಗಲು ಇದೂ ಒಂದು ಕಾರಣ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net