ಶಿವಮೊಗ್ಗದಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ

lakshmi
Published on

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರ, ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಟಿಜಿಟಿ ಮಳೆಯ ನಡುವೆಯೂ ವರಮಹಾಲಕ್ಷ್ಮೀ ಆರಾಧನೆಗೆ ಚ್ಯುತಿ ಬಾರದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಅಲಂಕಾರ ಹಾಗೂ ಪೂಜೆಯೊಂದಿಗೆ ಲಕ್ಷ್ಮಿಯನ್ನು ಸ್ತುತಿಸಲಾಯಿತು.

ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಿಗೆ ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು. ಜಿಎಸ್‌ಕೆಎಂ ರಸ್ತೆಯ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಮಹಿಳಾ ಮಂಡಳಿಯಿಂದ ಸಾಮೂಹಿಕ ಕುಂಕುಮಾರ್ಚನೆ, ಲಕ್ಷ್ಮೀ ಸಹಸ್ರನಾಮ ಪೂಜೆ ನೆರವೇರಿಸಲಾಯಿತು.

ಹಬ್ಬದ ಹಿನ್ನೆಲೆಯಲ್ಲಿ ಜನರು ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬೆಳಗ್ಗೆ 10ರವರೆಗೂ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿತ್ತು. ಬಾಳೆ ಕಂದು, ಮಾವಿನ ಸೊಪ್ಪು, ಹಣ್ಣು, ಹೂ, ಕಾಯಿ ಇನ್ನಿತರ ಪೂಜಾ ಪರಿಕರಗಳ ಖರೀದಿ ನಡೆಯಿತು.ಪ್ರಮುಖ ವ್ಯಾಪಾರ ಕೇಂದ್ರಗಳಾದ ಗಾಂಧಿಬಜಾರ್, ಬಿಎಚ್ ರಸ್ತೆ, ದುರ್ಗಿಗುಡಿ, ನೆಹರೂ ರಸ್ತೆ ಗೋಪಿ ವೃತ್ತದಲ್ಲಿ ಜನಸಂಚಾರ ಹೆಚ್ಚಿತ್ತು.

ವರಮಹಾಲಕ್ಷ್ಮೀ ಹಬ್ಬದ ದಿನದಂದು ಹೊಸ ವಸ್ತುಗಳನ್ನು ಖರೀದಿಸಿದರೆ ಒಳಿತು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಕೆಲವರು ಚಿನ್ನಾಭರಣ, ಗೃಹೋಪಯೋಗಿ ವಸ್ತುಗಳು ಹಾಗೂ ವಾಹನ ಖರೀದಿಗೆ ಮುಂದಾದರು. ಟ್ರಾೃಕ್ಟರ್, ಕಾರ್, ದ್ವಿಚಕ್ರ ವಾಹನಗಳು ಟಿವಿ, ಫ್ರಿಜ್, ವಾಷಿಂಗ್ ಮೆಷಿನ್ ಮುಂತಾದ ಉಪಕರಣಗಳನ್ನು ಹಲವರು ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net