ಹೊರನಾಡು ದೇಗುಲ ದರ್ಶನ ಪಡೆದ ಲಕ್ಷ್ಮೀ ಹೆಬ್ಬಾಳ್ಕರ್

hebbalkar
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೊರನಾಡಿಗೆ ಭೇಟಿ ನೀಡಿ ಮೊಮ್ಮಗಳು ಆಯಿರಾಗೆ ಅನ್ನಪ್ರಾಶನ ಮಾಡಿಸಿದರು. ಮಗ ಮ್ರಿನಾಲ್ ಹೆಬ್ಬಾಳ್ಕರ್, ಸೊಸೆ ಹಿತಾ ಹೆಬ್ಬಾಳ್ಕರ್ ಇತರರಿದ್ದರು.
Published on

ಕಳಸ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಕುಟುಂಬಸ್ಥರು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿ ದರ್ಶನ ಪಡೆದರು.

ಮಗ ಮ್ರಿನಾಲ್ ಹೆಬ್ಬಾಳ್ಕರ್, ಸೊಸೆ ಹಿತಾ ಹೆಬ್ಬಾಳ್ಕರ್, ಮೊಮ್ಮಗಳು ಆಯಿರಾ ಸೇರಿ ಕುಟುಂಬದ ಹದಿನೈದು ಸದಸ್ಯರೊಂದಿಗೆ ಹೊರನಾಡು ದೇವಸ್ಥಾನಕ್ಕೆ ಭೇಟಿ ನೀಡಿದ ಸಚಿವೆ ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ನೆರವೇರಿಸಿದರು. ಮೊಮ್ಮಗಳು ಆಯಿರಾಗೆೆ ದೇವಸ್ಥಾನದಲ್ಲಿ ಅನ್ನಪ್ರಾಶನ ಮಾಡಿಸಿದರು. ಹೊರನಾಡಿನಲ್ಲಿ ಪೂಜೆ ಮುಗಿಸಿ ಅನ್ನ ಪ್ರಸಾದ ತೆಗೆದುಕೊಂಡರು.
ದೇವಾಲಯಕ್ಕೇ ಭೇಟಿ ನೀಡುವ ಮುನ್ನ ಕಳಸದಲ್ಲಿರುವ ಶಾಸಕರ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಮಾತನಾಡಿದರು. ಕಳಸ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ್, ಕಾಂಗ್ರೆಸ್ ಮುಖಂಡರಾದ ಹಿತ್ತಲಮಕ್ಕಿ ರಾಜೇಂದ್ರ, ಸುಧಾಕರ್, ವೀರೇಂದ್ರ, ಸಂಶುದ್ದೀನ್ ಹೊರನಾಡು ಗ್ರಾಪಂ ಅಧ್ಯಕ್ಷ ಮಧುಕುಮಾರ್ ಇತರರಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ಮಾಡಿದರು.
ಗೃಹಲಕ್ಷ್ಮಿ ಯೋಜನೆ ಸಂಪೂರ್ಣ ಜಾರಿ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಸಚಿವರು ಮಾತನಾಡಿ, ಇನ್ನುಮುಂದೆ ಪ್ರತಿ ತಿಂಗಳು ಒಂದು ದಿನ ಗೃಹಲಕ್ಷ್ಮಿ ಅದಾಲತ್ ನಡೆಸಿ, ಬಾಕಿ ಪ್ರಕರಣ ಇತ್ಯರ್ಥ ಮಾಡೋಣ. ಮಹಿಳೆಯರು ಯೋಜನೆ ಬಗ್ಗೆ ತುಂಬ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಇನ್ನು ಮುಂದೆ ನಮ್ಮ ಸರ್ಕಾರ ಇಲ್ಲವಾದರೂ ಬೇರ‌್ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕಾರಣ ಹೇಳಿ ಯೋಜನೆ ರದ್ದುಗೊಳಿಸಲು ಸಾಧ್ಯವಿಲ್ಲ. ಒಂದು ವೇಳೆ ನಿಲ್ಲಿಸಿದರೆ ಜನ ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಉಪ ನಿರ್ದೇಶಕ ರಾಜಾನಾಯ್ಕ ಮಾತನಾಡಿ, ಜಿಲ್ಲೆಯಲ್ಲಿ 2,52,593 ಜನ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ನೋಂದಾಯಿಸಿದ್ದಾರೆ. ಈ ಪೈಕಿ 2,44,976 ಜನರಿಗೆ ನಗದನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು. ಇದಾದ ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶೃಂಗೇರಿಗೆ ಪ್ರಯಾಣ ಬೆಳೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net