

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಪ್ರಕರಣ(Lakshmi Hebbalkar case) ಸರ್ಕಾರ ಹಾಗೂ ಸಭಾಪತಿಗಳ ನಡುವೆ ವಾಗ್ಯುದ್ಧಕ್ಕೆ ಆಸ್ಪದ ಮಾಡಿಕೊಟ್ಟಿದೆ.
ಪ್ರಕರಣವನ್ನು ಸಿಐಡಿಗೆ ವಹಿಸಿರುವುದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ. ಪರಮೇಶ್ವರ(G.Parameswar) , ಹೊರಟ್ಟಿ ಅವರ ಪತ್ರ ನನಗೆ ಇನ್ನೂ ಸಿಕ್ಕಿಲ್ಲ(I have not received the Horatti letter). ಆ ಪತ್ರದಲ್ಲಿ ಏನಿದೆ ಎಂಬುದನ್ನು ನೋಡುತ್ತೇನೆ. ಅದಾದ ನಂತರ ಕಾನೂನು ಸಲಹೆ ಪಡೆಯುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಏನು ಮಾಡಬೇಕೋ ಮಾಡುತ್ತೇವೆ. ಕಾನೂನೂ ಯಾರಿಗೂ ಹೊರತಾಗಿಲ್ಲ.
ಹೊರಟ್ಟಿಯವರೂ ಅದೇ ಚೌಕಟ್ಟಿನಲ್ಲಿ ತೀರ್ಪು ಕೊಡುತ್ತಾರೆ. ನಾವೂ ನಮ್ಮ ತನಿಖೆಯನ್ನು ಅದೇ ಕಾನೂನು ಚೌಕಟ್ಟಿನಲ್ಲಿ ಮಾಡುತ್ತೇವೆ ಎಂದರು.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ದೂರಿನ ಮೇರೆಗೆ ಪೊಲೀಸರು ನಡೆದುಕೊಂದರು. ಅದೆಲ್ಲ ಪರಿಶೀಲಿಸುತೇವೆ. ಕಾನೂನು ಚೌಕಟ್ಟಿನಲ್ಲಿ ಶಾಸಕಾಂಗದ ಸಾರ್ವಭೌಮತ್ವ ಉಲ್ಲಂಘನೆ ಆಗಿದೆಯಾ ಎಂಬುದನ್ನು ನೋಡುತ್ತೇವೆ ಎಂದು ಹೇಳಿದರು. ಸೋಮವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಯ ಅಜೆಂಡಾ ಬಗ್ಗೆ ನನಗೆ ಗೊತ್ತಿಲ್ಲ. ಬಜೆಟ್, ಶಾಸಕರ ಸಮಸ್ಯೆಗಳು, ಜಾತಿ ಜನಗಣತಿ ವಿಚಾರ ಚರ್ಚೆ ಆಗಬಹುದು ಎಂದು ತಿಳಿಸಿದರು.
ಸಿ.ಟಿ. ರವಿಗೆ ಅನಾಮಿಕರಿಂದ ಬೆದರಿಕೆ ಪತ್ರ ವಿಚಾರವನ್ನು ನಾನೂ ಮಾಧ್ಯಮಗಳಲ್ಲಿ ನೋಡಿದೆ. ಅವರಿಗೆ ಬಂದಿರುವ ಬೆದರಿಕೆ ಪತ್ರದ ಬಗ್ಗೆ ಪರಿಶೀಲಿಸುತ್ತೇವೆ. ಈಗಾಗಲೇ ಸಿಐಡಿಯವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪತ್ರದ ವಿಚಾರವನ್ನೂ ಪರಿಗಣಿಸುತ್ತಾರೆ. ಪತ್ರ ಯಾರು ಬರೆದರು ಎಂಬುದು ಗೊತ್ತಿಲ್ಲವಲ್ಲ. ಯಾರು ಬರೆದಿದ್ದು ಅಂತ ತನಿಖೆಯಿಂದ ಗೊತ್ತಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಷ ಉಂಟು ನಾನುಂಟು ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತುಗಳ ಬಗ್ಗೆ ಪ್ರತಿಕ್ರಿಯಿಸಿ ಅವರು, ಒಳ್ಳೆಯ ತೀರ್ಮಾನ ಅದು. ಏಕೆಂದರೆ ಪಕ್ಷ ಅಂತಿಮವಾಗಿ ಏನು ತೀರ್ಮಾನ ಮಾಡುತ್ತೋ ನಾವೆಲ್ಲ ಅದನ್ನು ಒಪ್ಪುತ್ತೇವೆ. ಹಾಗಾಗಿ ನಾವೆಲ್ಲ ಅಂತಿಮವಾಗಿ ಹೈಕಮಾಂಡ್ ಎಂದೇ ಹೇಳುತ್ತೇವೆ. ಪಕ್ಷದ ತೀರ್ಮಾನ ಏನಾಗುತ್ತೋ ಅಂತಿಮವಾಗಿ ಅದೇ ಆಗೋದು. ಶಿವಕುಮಾರ್ ಸಹ ಅದೇ ಮಾತಾಡಿದ್ದಾರೆ, ಬಹಳ ಸಂತೋಷ. ಪಕ್ಷದ ಚೌಕಟ್ಟಿನಲ್ಲಿ ಹೋಗೋದು ನಮ್ಮೆಲ್ಲರ ಕರ್ತವ್ಯ, ಅದನ್ನು ನಾವು ಮಾಡುತ್ತೇವೆ ಎಂದರು.
ನಕ್ಸಲರ ಶಸ್ತ್ರಾಸ್ತ್ರ ವಶ ಪಡಿಸಿಕೊಳ್ಳಲಾಗಿದೆ. ಮುಂದೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಶರಣಾಗತಿ ಅಂದರೆ ಶಸ್ತ್ರಾಸ್ತ್ರ ತ್ಯಜಿಸಿ ಬಂದರಲ್ಲ ಅದೇ ಶರಣಾಗತಿ. ಅವರ ಹೋರಾಟಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ಸಂವಿಧಾನ ಹೇಳಿದ ದಾರಿಯಲ್ಲಿ ಹೋರಾಟ ಮಾಡಲಿ.
ಆದರೆ, ಶಸಾಸ ಬಳಕೆ ಮಾಡುವ ಮಾರ್ಗ ಬೇಡ. ಶಸ್ತ್ರಗಳ ದಾರಿ ಹಿಡಿಯುವುದಿಲ್ಲ ಎಂದು ನಕ್ಸಲರು ಹೇಳಿದ್ದಾರೆ. ನಕ್ಸಲರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ ಎಂದು ಡಾ.ಪರಮೇಶ್ವರ ಹೇಳಿದರು.