Cardamom: ಲಕ್ಷ ಲಕ್ಷ ಆದಾಯ ತಂದುಕೊಟ್ಟ ಏಲಕ್ಕಿ

ವಿಜಯವಾಣಿ-6-3
Published on

| ತಿಪ್ಪಣ್ಣ ಅವಧೂತ, ಹುಬ್ಬಳ್ಳಿ

ವಿದ್ಯುತ್ ಯೋಜನೆಗಾಗಿ ಜಮೀನು ಕಳೆದುಕೊಂಡರೂ ಧೃತಿಗೆಡದೆ, ಸಾವಯವ ಕೃಷಿಯಲ್ಲಿ ಖುಷಿ ಕಂಡ ಸಾಧಕನ ಕಥೆ ಇದು. ಕೊಡಸಳ್ಳಿ ಜಲವಿದ್ಯುತ್ ಯೋಜನೆಗೆ ಜಮೀನು ಕಳೆದುಕೊಂಡು ಜೊಯಿಡಾದ ಪಣಸೋಲಿಗೆ ವಲಸೆ ಬಂದ ರವೀಂದ್ರ ಭಟ್ಟ, ಸಾವಯವ ಕೃಷಿ ಮೂಲಕ 20 ಎಕರೆ ಜಮೀನಿನಲ್ಲಿ ಏಲಕ್ಕಿ, ಲವಂಗ, ಕಾಳುಮೆಣಸು, ಜಾಯಿಕಾಯಿ ಮುಂತಾದ ಸಾಂಬಾರ ಪದಾರ್ಥಗಳನ್ನು ಬೆಳೆದಿದ್ದಾರೆ. ಜತೆಗೆ ತೆಂಗು, ಅಡಕೆ ಹಾಗೂ ಕಾಫಿ ಬೆಳೆದು ಸುಸ್ಥಿರ ಕೃಷಿಗೆ ಬುನಾದಿ ಹಾಕಿದ್ದಾರೆ. ಒಟ್ಟಾರೆ ಎಲ್ಲ ರೀತಿಯ ಬೆಳೆಗಳಿಂದ 2023-24ನೇ ಸಾಲಿನಲ್ಲಿ 30 ಲಕ್ಷ ರೂ. ಆದಾಯ ಗಳಿಸಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಯವ ಕೃಷಿ ಮೂಲಕ 5 ಕ್ವಿಂಟಾಲ್ ಏಲಕ್ಕಿ ಬೆಳೆದ ಕೆಲವೇ ರೈತರಲ್ಲಿ ಇವರೂ ಒಬ್ಬರು. ಕಳೆದ ವರ್ಷ ಕಟಾವಿಗೂ ಮುನ್ನ ನಮ್ಮ ಸಾವಯವ ಕೃಷಿ ಬಗ್ಗೆ ತಿಳಿದಿದ್ದ ಶಿರಸಿಯ ಕದಂಬ ಮಾರ್ಕೆಟಿಂಗ್ ಸಂಸ್ಥೆಯವರು ಅಮೆರಿಕದ ಕೆಲವು ಕೃಷಿ ತಜ್ಞರೊಂದಿಗೆ ತೋಟಕ್ಕೆ ಭೇಟಿ ನೀಡಿ ಏಲಕ್ಕಿ ಖರೀದಿಸಿದ್ದರು. ಆದರೆ, ಬೆಳೆ ಉತ್ತಮವಾಗಿದ್ದರೂ ಹೆಚ್ಚು ಲಾಭ ಸಿಗಲಿಲ್ಲ ಎನ್ನುತ್ತಾರೆ ರವೀಂದ್ರ.

5 ಕ್ವಿಂಟಾಲ್​ಗೆ 7.5 ಲಕ್ಷ

ಕಳೆದ ವರ್ಷ ಮಾರ್ಕೆಟ್​ನಲ್ಲಿ ಕೆಜಿ ಏಲಕ್ಕಿಗೆ 750 ರೂ. ಇದ್ದರೆ, ನಾನು ಬೆಳೆದ ಏಲಕ್ಕಿಗೆ 1500 ರೂ. ದರ ಸಿಕ್ಕಿದೆ. ಸಾವಯವ ಮೂಲಕ ಬೆಳೆಯುವುದರಿಂದ ಫಸಲು ಕಡಿಮೆ ಬರುತ್ತದೆ. ಹೆಚ್ಚಿನ ಲಾಭದ ನಿರೀಕ್ಷೆ ಇರುತ್ತದೆ. ಆದರೆ, ಬೆಳೆ ಕಟಾವಿಗೂ ಮುನ್ನವೇ ತಮಗೆ ನೀಡಬೇಕೆಂದು ಮುಂಗಡ ಬುಕಿಂಗ್ ಮಾಡುವುದರಿಂದ ಬೆಲೆ ಹೆಚ್ಚಿದ್ದರೂ ಬೇರೆ ಕಡೆ ಮಾರಾಟ ಮಾಡದಂತಾಗಿದೆ ಎನ್ನುತ್ತಾರೆ ರವೀಂದ್ರ.

ಸಾವಯವ ಕೃಷಿ ಸಾಧಕ ಪ್ರಶಸ್ತಿ ಪ್ರದಾನ

ಶಿರಸಿ ಸಾವಯವ ಒಕ್ಕೂಟದಿಂದ ಕೊಡಮಾಡುವ ಸಾವಯವ ಕೃಷಿ ಸಾಧಕ ಪ್ರಶಸ್ತಿಯನ್ನು ರವೀಂದ್ರ ಭಟ್ ಅವರಿಗೆ ನೀಡಿ ಗೌರವಿಸಲಾಗಿದೆ. ಅವರು 2023-24ನೇ ಸಾಲಿನಲ್ಲಿ ಸುಮಾರು 30 ಲಕ್ಷ ರೂ.ಗೂ ಅಧಿಕ ಮೌಲ್ಯದ ಸಾವಯವ ಉತ್ಪನ್ನಗಳನ್ನು ಒಕ್ಕೂಟಕ್ಕೆ ಮಾರಾಟ ಮಾಡಿದ್ದು ದಾಖಲೆಯಾಗಿದೆ.

ಕಾಡು ವರದಾನ, ಗೌಳಿಗರ ಗುಣಗಾನ

ನಮ್ಮ ಜಮೀನಿನ ಸುತ್ತಲೂ ಕಾಡು ಹಾಗೂ ಗೌಳಿಗರೇ ಹೆಚ್ಚಿದ್ದಾರೆ. ಅದು ಸಾವಯವ ಗೊಬ್ಬರಕ್ಕೆ ವರದಾನವಾಗಿದೆ. 15 ಹಸುಗಳಿದ್ದು 7 ಎಕರೆಗೆ ಸೆಗಣಿಯನ್ನೇ ಬಳಸುತ್ತೇವೆ. ಉಳಿದ ಜಮೀನಿಗೆ ತರಗೆಲೆ ಹಾಗೂ ಗೌಳಿಗರ ಹಸುಗಳ ಸೆಗಣಿ ಖರೀದಿ ಮಾಡಿ ಬಳಸುತ್ತೇವೆ ಎನ್ನುತ್ತಾರೆ ರವೀಂದ್ರ ಭಟ್ಟ.

ಮಳೆ ತಂದ ರಗಳೆ

2024ರ ಜೂನ್​ನಿಂದ ಆರಂಭವಾದ ಮಳೆ ಮೂರೂವರೆ ತಿಂಗಳು ನಿರಂತರ ಸುರಿದಿದೆ. ಇದರಿಂದ ಏಲಕ್ಕಿ, ಕಾಳುಮೆಣಸು ಜತೆಗೆ ಅಡಕೆಗೆ ಕೊಳೆ ರೋಗ ಆವರಿಸಿ ಫಸಲು ನಾಶವಾಗಿದೆ. ಏಲಕ್ಕಿಯಂತೂ ಬುಡದಲ್ಲೇ ಕೊಳೆತು ಕಿತ್ತು ಹಾಕುವುದೊಂದೇ ಬಾಕಿ ಇದೆ.

ಸತತ ಮಳೆಯಿಂದ ಏಲಕ್ಕಿ, ಕಾಳುಮೆಣಸು ಸಂಪೂರ್ಣ ಕೊಳೆತಿದೆ. ಇದರಿಂದ ಅಪಾರ ನಷ್ಟವಾಗಿದೆ. ಸಾಂಬಾರ ಮಂಡಳಿ ಅಧಿಕಾರಿಗಳು ಜಮೀನಿಗೆ ಭೇಟಿ ಏಲಕ್ಕಿ, ಕಾಳುಮೆಣಸನ್ನು ಕಿತ್ತು ಹಾಕುವಂತೆ ಸಲಹೆ ನೀಡಿದ್ದಾರೆ. ಮುಂದಿನ ವರ್ಷದಿಂದ ಕಾಫಿ ಬೆಳೆಯುವ ಆಲೋಚನೆ ಇದೆ. | ರವೀಂದ್ರ ಭಟ್ಟ ಸಾವಯವ ಕೃಷಿಕ ಪಣಸೋಲಿ, ಜೊಯಿಡಾ https://www.vijayavani.net/17-contestants-into-the-bbks11-house

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net