ಕೃಷಿ ಕ್ಷೇತ್ರದ ಮೂಲಸೌಕರ್ಯಕ್ಕೆ ಲಕ್ಷ ಕೋಟಿ ರೂಪಾಯಿ

Modi
Published on

ನವದೆಹಲಿ: ಕೃಷಿ ಮೂಲಸೌಕರ್ಯ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿ ಒಂದು ಲಕ್ಷ ಕೋಟಿ ರೂಪಾಯಿಯ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗುತ್ತದೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಕಾರ್ಯಕ್ರಮ ನಡೆಯಲಿದ್ದು, ದೇಶದ ವಿವಿಧ ಭಾಗಗಳ ರೈತರು ಮತ್ತು ಸಹಕಾರಿ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಕೇಂದ್ರ ಸಚಿವ ಸಂಪುಟದಲ್ಲಿ ಈ ಯೋಜನೆಗೆ ಅನುಮೋದನೆ ದೊರೆತಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಆರನೇ ಕಂತಿನ ಹಣವನ್ನೂ ಭಾನುವಾರ ಮೋದಿ ಬಿಡುಗಡೆ ಮಾಡಲಿದ್ದಾರೆ. 8.5 ಕೋಟಿ ರೈತರಿಗೆ 17 ಸಾವಿರ ಕೋಟಿ ರೂಪಾಯಿ ಸಿಗಲಿದೆ.

ಏನಿದು ಯೋಜನೆ?

ಸುಗ್ಗಿಯ ನಂತರದ ದಿನಗಳಲ್ಲಿ ರೈತರ ಬೆಳೆಗೆ ಬೇಕಾದ ಮೂಲಸೌಕರ್ಯಗಳನ್ನು ನಿರ್ವಿುಸಿಕೊಡುವ ಯೋಜನೆ ಯನ್ನು ಹಾಕಿಕೊಳ್ಳಲಾಗಿದೆ. ಶಿತಲೀಕರಣ ಘಟಕಗಳು, ಸಂಗ್ರಹ ಕೇಂದ್ರಗಳು, ಸಂಸ್ಕರಣಾ ಘಟಕಗಳನ್ನು ನಿರ್ವಿುಸಲಾಗುವುದು. ಶೇ.3 ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಈಗಾಗಲೇ 11 ಸಾರ್ವಜನಿಕ ವಲಯದ ಬ್ಯಾಂಕುಗಳು ಈ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ತಿಳಿಸಲಾಗಿದೆ.

ಕರೊನಾ ನಿಗ್ರಹಕ್ಕೆ ಸ್ವಚ್ಛ ಭಾರತ

ಕರೊನಾ ಸೋಂಕು ನಿಯಂತ್ರಣದಲ್ಲಿ ಸ್ವಚ್ಛ ಭಾರತ ಯೋಜನೆಯ ಪಾತ್ರವೂ ಇದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೆಹಲಿಯ ರಾಜಘಾಟ್​ನ ಬಳಿಯಲ್ಲಿ ನಿರ್ವಿುಸಲಾಗಿರುವ ರಾಷ್ಟ್ರೀಯ ಸ್ವಚ್ಛತಾ ಕೇಂದ್ರವನ್ನು (ಆರ್​ಎಸ್​ಕೆ) ಉದ್ಘಾಟಿಸಿದ ಅವರು ಮಾತನಾಡಿದರು. ಗಾಂಧಿಜೀ ಸ್ಮರಣಾರ್ಥ ಸ್ವಚ್ಛತಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಆಗಸ್ಟ್ 8ರಿಂದ 15ರವರೆಗೆ ಒಂದು ವಾರದ ಕಾಲ ‘ಭಾರತವನ್ನು ಕಸದಿಂದ ಮುಕ್ತಗೊಳಿಸಿ’ ಆಂದೋಲನವನ್ನು ನಡೆಸಲಾಗುವುದು ಎಂದು ಪ್ರಧಾನಿ ತಿಳಿಸಿದರು. ಕಾರ್ಯಕ್ರಮದಲ್ಲಿ 28 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುತ್ತಿದ್ದ 36 ವಿದ್ಯಾರ್ಥಿಗಳೊಂದಿಗೆ ಅವರು ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net