Lakhimpur Kheri Case: ತನಿಖೆ ಮೇಲ್ವಿಚಾರಣೆಗೆ ನಿವೃತ್ತ ನ್ಯಾಯಮೂರ್ತಿಗಳ ನೇಮಕ

lksc
Published on

ನವದೆಹಲಿ: ಎಂಟು ಜನರು ಮೃತಪಟ್ಟಿದ್ದ ಉತ್ತರಪ್ರದೇಶದ ಲಖೀಂಪುರ್​ ಖೇರಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಬಗ್ಗೆ ರಾಜ್ಯದ ಪೊಲೀಸರು​ ಸಲ್ಲಿಸಿದ ಸ್ಟೇಟಸ್​ ರಿಪೋರ್ಟ್​ ಬಗ್ಗೆ ಸುಪ್ರೀಂ ಕೋರ್ಟ್​ ಅಸಮಾಧಾನ ವ್ಯಕ್ತಿಪಡಿಸಿತು. ಅಕ್ಟೋಬರ್ 3 ರಂದು ನಡೆದಿದ್ದ ಘಟನೆಯ ಕುರಿತಾಗಿ ಎರಡು ಎಫ್​ಐಆರ್​ಗಳು ದರ್ಜಾಗಿದ್ದು, ಈವರೆಗೆ ಪೊಲೀಸರು ಯಾವುದೇ ಚಾರ್ಜ್​ಶೀಟ್​ ಸಲ್ಲಿಸಿಲ್ಲ.

ಪ್ರಕರಣದ ತನಿಖೆಯ ಪ್ರಗತಿಯ ಬಗ್ಗೆ ಯುಪಿ ಪೊಲೀಸರು ಸಲ್ಲಿಸಿರುವ ವರದಿಯಲ್ಲಿ ಹೆಚ್ಚಿನ ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ ಎಂಬುದರ ಹೊರತಾಗಿ ಏನೂ ಇಲ್ಲ. ತನಿಖೆ ನಾವು ಅಪೇಕ್ಷಿಸಿದ ರೀತಿಯಲ್ಲಿ ನಡೆಯುತ್ತಿಲ್ಲ ಎಂದು ನ್ಯಾಯಮೂರ್ತಿಗಳು ಬೇಸರ ವ್ಯಕ್ತಪಡಿಸಿದರು.

ಜೊತೆಗೆ, ಪ್ರಕರಣದಲ್ಲಿ ಸಾಕ್ಷ್ಯಗಳು ಕಲಸಿಹೋಗದಂತೆ ನೋಡಿಕೊಳ್ಳಲು ಅನ್ಯ ಹೈಕೋರ್ಟ್​​ನ ಓರ್ವ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವುದಾಗಿ ಕೋರ್ಟ್​ ಹೇಳಿತು. ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ರಾಕೇಶ್​ ಕುಮಾರ್​ ಜೈನ್​ ಅಥವಾ ನಿವೃತ್ತ ನ್ಯಾಯಮೂರ್ತಿ ರಣಜೀತ್​ ಸಿಂಗ್​ ಅವರನ್ನು ತನಿಖೆಯ ಮೇಲ್ವಿಚಾರಣೆಗಾಗಿ ನೇಮಿಸುವ ಇಂಗಿತ ವ್ಯಕ್ತಪಡಿಸಿತು.

ಈ ನಡುವೆ, ಲಖೀಂಪುರ್​ ಖೇರಿಯಲ್ಲಿ ಅ.3 ರಂದು ಮೃತಪಟ್ಟಿದ್ದ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್​ ಅವರನ್ನು ರೈತರು ಸಾಯಿಸಿಲ್ಲ. ಬದಲಿಗೆ ರೈತರ ಮೇಲೆ ಹರಿದುಹೋದ ವಾಹನದಡಿಯಲ್ಲೇ ಅವರೂ ಸಿಕ್ಕಿ ಸತ್ತಿದ್ದಾರೆ ಎಂದು ಸರ್ಕಾರ ಕೋರ್ಟ್​ಗೆ ತಿಳಿಸಿತು. ವಿಚಾರಣೆಯನ್ನು ಶುಕ್ರವಾರ(ನ.12)ಕ್ಕೆ ಮುಂದೂಡಲಾಯಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net