

ಸೊರಬ: ಪುರಸಭೆ ವ್ಯಾಪ್ತಿಯ ಕೊಡಕಣಿ ಗ್ರಾಮದ ಚೀಲಕೆರೆಯಲ್ಲಿ ಮಂಗಳವಾರ ಮೀನು ಬೇಟೆ ಮಾಡಿ ಜನ ಸಂಭ್ರಮಪಟ್ಟರು. ನೂರಾರು ಜನ ಕೆರೆ ಬೇಟೆಯಲ್ಲಿ ಪಾಲ್ಗೊಂಡಿದ್ದರು. ಕೆರೆಬೇಟೆ ಮಲೆನಾಡಿನ ಗ್ರಾಮೀಣ ಕ್ರೀಡೆಗಳಲ್ಲೊಂದು. ತಾಲೂಕಿನಲ್ಲಿ ಅತ್ಯಧಿಕ ಕೆರೆಗಳಿದ್ದು, ವರ್ಷಕ್ಕೊಮ್ಮೆ ನಡೆಯುವ ಈ ಬೇಟೆಯಲ್ಲಿ ಗ್ರಾಮಸ್ಥರು ಭಾಗವಹಿಸುತ್ತಾರೆ. ಮುಂಗಾರಿನಲ್ಲಿ ಕೆರೆಗಳು ಭರ್ತಿಯಾದಾಗ ಗ್ರಾಮಸ್ಥರು ವಿವಿಧ ಜಾತಿಯ ಮೀನಿನ ಮರಿಗಳನ್ನು ಬಿಡುತ್ತಾರೆ. ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಗ್ರಾಮದಲ್ಲಿ ಕೆರೆಬೇಟೆ ಸಾರುತ್ತಾರೆ. ಮೀನು ಹಿಡಿಯುವ, ತಿನ್ನುವವರಿಗೆ ಎಲ್ಲಿಲ್ಲದ ಸಂಭ್ರಮ. ಇದೆಲ್ಲದರ ನಡುವೆ ಒಂದು ಹಬ್ಬವಾಗಿ ಕೆರೆಬೇಟೆಯನ್ನು ಸಂಭ್ರಮಿಸುತ್ತಾರೆ. ಕೆರೆಬೇಟೆಯಲ್ಲಿ ಕೂಣಿ ಹಾಗೂ ಜರಡಿ ಬಲೆಗೆ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಮಾತ್ರ ಕೆರೆಬೇಟೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿತ್ತು.