

ಹಾನಗಲ್ಲ: ಜಾಮೀನಿನ ಮೇಲೆ ಬಿಡುಗಡೆಯಾಗಿ ಮೆರವಣಿಗೆ ನಡೆಸಿ ಅನುಚಿತ ವರ್ತನೆ ತೋರಿದ ಹಾನಗಲ್ಲ ಗ್ಯಾಂಗ್ರೇಪ್ ಆರೋಪಿಗಳಿಗೆ ಹಾನಗಲ್ಲ ಪಿಎಸ್ಐ, ಲೇಡಿ ಸಿಂಗ್ಂ ದೀಪಾಲಿ ಹೆಡೆಮುರಿ ಕಟ್ಟಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಮತ್ತೆ ಕಂಬಿ ಎಣಿಸುವಂತಾಗಿದೆ. ಅನುಚಿತ ವರ್ತನೆ ತೋರಿದ್ದಕ್ಕೆ 7 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರೋಡ್ ಶೋ ನಡೆಸಿದ್ದ ಕಾರುಗಳನ್ನು ಸೀಜ್ ಮಾಡಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಆರೋಪಿಗಳ ಜಾಮೀನು ರದ್ದು ಪಡಿಸುವಂತೆಯೂ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.
ಹಿನ್ನೆಲೆ: 26 ವರ್ಷದ ಸಂತ್ರಸ್ತೆ ಏಳು ಪುರುಷರಿಂದ ತನ್ನ ಮೇಲೆ ಜನವರಿ 8, 2024ರಂದು ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಮ್ಯಾಜಿಸ್ಟ್ರೇಟ್ ಮುಂದೆಯೂ ಹೇಳಿಕೆ ನೀಡಿದ್ದಳು. ತಹಸೀಲ್ದಾರ್ ಸಮ್ಮುಖದಲ್ಲಿ ನಡೆದ ಗುರುತಿನ ಪರೇಡ್ನಲ್ಲಿ ಶಂಕಿತರನ್ನು ಗುರುತಿಸಿದ್ದಳು. ಆದರೆ, ಸಂತ್ರಸ್ತೆ ತನ್ನ ಹಿಂದಿನ ಹೇಳಿಕೆಗೆ ತದ್ವಿರುದ್ಧವಾದ ಹೇಳಿಕೆ ನೀಡಿ ರೇಪ್ ನಡೆದೇ ಇಲ್ಲ ಎಂಬಂತೆ ಹೇಳಿಕೆ ನೀಡಿದ್ದರಿಂದ ನ್ಯಾಯಾಲಯ ಏಳು ಪ್ರಮುಖ ಆರೋಪಿಗಳಿಗೆ ಜಾಮೀನು ನೀಡಿದೆ ಎನ್ನಲಾಗಿದೆ. ಇದೀಗ ಜಾಮೀನು ಸಿಕ್ಕ ಖುಷಿಯಲ್ಲಿ ಆರೋಪಿಗಳು ಕಾರು, ಬೈಕ್ಗಳಲ್ಲಿ ರೋಡ್ ಶೋ ನಡೆಸಿದ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಮತ್ತೆ ಕಂಬಿ ಎಣಿಸುವಂತೆ ಮಾಡಿದ್ದಾರೆ.