

ನವದೆಹಲಿ: ಲಡಾಖ್ ಪ್ರದೇಶದ ವಾಸ್ತವ ಗಡಿರೇಖೆ (ಎಲ್ಎಸಿ) ಬಳಿ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಚೀನಾದೊಂದಿಗೆ ಮಾತುಕತೆ ಜಾರಿಯಲ್ಲಿದೆ. ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಚೀನಾ ಯುದ್ಧೋನ್ಮಾದದಲ್ಲಿದ್ದರೂ ಅದಕ್ಕೆ ಯುದ್ಧ ಬೇಕಾಗಿಲ್ಲ. ಹಾಗಾಗಿ ಉಭಯ ರಾಷ್ಟ್ರಗಳು ಮಾತುಕತೆ ಮೂಲಕ ಬಿಕ್ಕಟ್ಟು ಪರಿಹರಿಸಿಕೊಳ್ಳಲು ಬಯಸಿವೆ. ಈ ಹಿನ್ನೆಲೆಯಲ್ಲಿ ರಾಜತಾಂತ್ರಿಕ ಮಟ್ಟದ ಮಾತುಕತೆಗಳು ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಕ್ಕಟ್ಟು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಎರಡೂ ರಾಷ್ಟ್ರಗಳು ತಮ್ಮದೇ ಆದ ಸ್ಥಾಪಿತ ಸಂವಹನ ಕ್ರಮವನ್ನು ಹೊಂದಿವೆ. ಈ ವ್ಯವಸ್ಥೆಯನ್ನು ಈಗಾಗಲೆ ಜಾಗೃತಗೊಳಿಸಲಾಗಿದೆ. ಹಾಗಾಗಿ, ಈ ಬಿಕ್ಕಟ್ಟಿನ ಪರಿಹಾರಕ್ಕೆ ವಿಶ್ವಸಂಸ್ಥೆ ಸೇರಿ ಯಾರೊಬ್ಬರ ಮಧ್ಯಸ್ಥಿಕೆಯ ಅವಶ್ಯಕತೆಯೂ ಇಲ್ಲ ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಭಾರತ ಮತ್ತು ಚೀನಾ ನಡುವೆ ಉದ್ಭವಿಸಿರುವ ಬಿಕ್ಕಟ್ಟನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ, ಈ ರೀತಿಯ ಮಧ್ಯಸ್ಥಿಕೆಯನ್ನು ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿರಸ್ಕರಿಸಿದ್ದರು.
ನೆರೆಹೊರೆ ರಾಷ್ಟ್ರಗಳೊಂದಿಗೆ ಸ್ನೇಹ ಮತ್ತು ಸೌಹಾರ್ದ ಸಂಬಂಧ ಹೊಂದುವುದು ಭಾರತದ ನೀತಿಯಾಗಿದೆ. ಆದರೆ, ಕೆಲವೊಮ್ಮೆ ಚೀನಾದೊಂದಿಗೆ ಇಂಥ ಪರಿಸ್ಥಿತಿ ಉದ್ಭವಿಸುತ್ತದೆ. ಈ ಹಿಂದೆ ಕೂಡ ಇಂಥ ಬಿಕ್ಕಟ್ಟುಗಳು ಉಂಟಾಗಿದ್ದವು. ಅವೆಲ್ಲವನ್ನೂ ಪರಿಹರಿಸಿಕೊಂಡ ರೀತಿಯಲ್ಲೇ ಈ ಬಿಕ್ಕಟ್ಟನ್ನೂ ಪರಿಹರಿಸಿಕೊಳ್ಳಲಾಗುವುದು ಎಂದು ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ದೌಲತಾ ಬೇಗ್ ಓಲ್ಡೀ ಬಳಿ ಭಾರತ ಸೇತುವೆ ನಿರ್ಮಿಸುತ್ತಿರುವುದಕ್ಕೆ ಆಕ್ಷೇಪಿಸಿದ್ದ ಚೀನಾ ಎಲ್ಎಸಿ ಬಳಿಗೆ 6 ಸಾವಿರಕ್ಕೂ ಹೆಚ್ಚು ಯೋಧರನ್ನು ರವಾನಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಎಲ್ಎಸಿ ಬಳಿ ನಿಯೋಜಿಸಿತ್ತು. ಇದರಿಂದಾಗಿ ಲಡಾಖ್ನಲ್ಲಿ ಬಿಕ್ಕಟ್ಟು ಉಂಟಾಗಿತ್ತು.