

ಶಿವಮೊಗ್ಗ: ಬಾಲ್ಯದಲ್ಲಿ ಸ್ನೇಹಿತರಾಗಿದ್ದವರೇ ವೃತ್ತಿಜೀವನದಲ್ಲಿ ಪ್ರತಿಸ್ಪರ್ಧಿಗಳಾಗಬೇಕಾದ ಸನ್ನಿವೇಶವಿದು. ಸಂಬಂಧಗಳನ್ನು ಆರ್ಥಿಕತೆಯೇ ನಿಯಂತ್ರಿಸುತ್ತಿದೆ. ಈ ತಂತ್ರಜ್ಞಾನದ ಕಾಲಘಟದಲ್ಲಿ ಸಾಹಿತ್ಯದ ಓದು ಸಹ ವಿರಳವಾಗುತ್ತಿದೆ ಎಂದು ಕವಿ, ಕಾದಂಬರಿಕಾರ ಎಂ.ಆರ್.ದತ್ತಾತ್ರಿ ಹೇಳಿದರು.
ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಯುಗದಲ್ಲಿ ಕಾದಂಬರಿ ಬರವಣಿಗೆ ಮತ್ತು ಓದು ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, 30-40 ವರ್ಷಗಳ ಹಿಂದೆ ಓದಲು ಸಾಹಿತ್ಯಿಕ ಕೃತಿಗಳು ಸಿಗುತ್ತಿರಲಿಲ್ಲ. ಇಂದು ಬೇಕಾದಷ್ಟು ಕೃತಿಗಳು ಸಿಗುತ್ತವೆ. ಆದರೆ ಸಮಯವೇ ಇಲ್ಲದಂತಾಗಿದೆ. ಇದು ತಂತ್ರಜ್ಞಾನದ ಫಲ ಎಂದರು.
ಇಂದು ಉದ್ಯೋಗ ಎಂಬುದು ನಮ್ಮ ನೆರಳಿಗಿಂತ ದೊಡ್ಡದಾಗಿ ಬೆಳೆದು ಹಿಂಬಾಲಿಸುತ್ತಿದೆ. ಹೀಗಾಗಿ ವೃತ್ತಿಜೀವನಕ್ಕೆ ಇನ್ನಿಲ್ಲದ ಒತ್ತು ನೀಡಬೇಕಾದ ಅನಿವಾರ್ಯತೆಯಿದೆ. ತಂತ್ರಜ್ಞಾನದಿಂದ ಸಾಹಿತ್ಯಿಕ ಹಾಗೂ ಓದುಗ ವಲಯಕ್ಕೆ ಕೆಲ ಅನುಕೂಲಗಳೂ ಆಗಿವೆ. ತಂತ್ರಜ್ಞಾನ ವಿಶ್ವವನ್ನೇ ಒಂದುಗೂಡಿಸಿದೆ. ಎಲ್ಲ ಮಾಹಿತಿಗಳೂ ನಮ್ಮ ಬೆರಳ ತುದಿಯಲ್ಲಿವೆ. ಈ ಹಂತದಲ್ಲಿ ನಮಗೆಷ್ಟು ಮಾಹಿತಿ ಅಗತ್ಯ ಎಂಬುದನ್ನು ನಿರ್ಧರಿಸಿಕೊಂಡು ಅಷ್ಟನ್ನೇ ಬಳಸಬೇಕಾದ ಹೊಣೆಗಾರಿಕೆಯೂ ನಮ್ಮ ಮೇಲಿದೆ ಎಂದು ತಿಳಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಎಚ್.ಶಂಕರನಾರಾಯಣ ಶಾಸ್ತ್ರಿ, ಗೌರವ ಕಾರ್ಯದರ್ಶಿ ವಿನಯ್ ಉಪಸ್ಥಿತರಿದ್ದರು.
ಕಾದಂಬರಿಯೇ ಹೆಚ್ಚು ಆಪ್ತ:ಕಾದಂಬರಿ ಮೂಲಕ ಭಾವಲೋಕದ ಆಳವನ್ನು ತಲುಪಬಹುದು. ಕಾದಂಬರಿ ರಚನೆ ಎಂದರೆ ಅದೊಂದು ದೀರ್ಘ ಪ್ರಯಾಣ. ಇದೇ ಕಾರಣದಿಂದ ನನಗೆ ಕಾದಂಬರಿ ಪ್ರಕಾರ ಹೆಚ್ಚು ಆಪ್ತವಾಗಿದೆ. ಓದುಗನಿಗೂ ಕಾದಂಬರಿಗೂ ಹೆಚ್ಚು ಪ್ರಿಯವಾಗಬಲ್ಲವು. ಏಕೆಂದರೆ ಅದರೊಳಗಿನ ಪಾತ್ರಗಳು ನಮ್ಮ ಜೀವನದ ಯಾವುದೇ ಹಂತದಲ್ಲಿ ಬಂದು ಹೋಗಿದ್ದ, ಇಲ್ಲವೇ ಈಗಲೂ ಹಾಸುಹೊಕ್ಕಾಗಿರುವ ಚಿತ್ರಣವೇ ಆಗಿರುತ್ತದೆ. ಬದುಕಿನ ಕೆಲವು ಮಗ್ಗಲುಗಳನ್ನು ಅವಲೋಕಿಸುವುದು ಕಾದಂಬರಿಯಿಂದ ಸಾಧ್ಯ ಎಂದು ಎಂ.ಆರ್.ದತ್ತಾತ್ರಿ ಅಭಿಪ್ರಾಯಪಟ್ಟರು.
ಅಮೆರಿಕದಲ್ಲಿನ ಸ್ಥಿತ್ಯಂತರ: ನಾನು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಅಲ್ಲಿನ ವರ್ಲ್ಡ್‌ಟ್ರೇಡ್ ಸೆಂಟರ್ ಮೇಲೆ ವಿಮಾನ ದಾಳಿ ನಡೆಯಿತು. ಅದು ಅನೇಕ ಸ್ಥಿತ್ಯಂತರಗಳಿಗೆ ಕಾರಣವಾಯಿತು. ಈ ಘಟನೆ ಬಳಿಕ ಅಲ್ಲಿನ ಜನರು ವಲಸಿಗರನ್ನು ಅನುಮಾನದಿಂದ ನೋಡುವ ಪ್ರವೃತ್ತಿ ಬೆಳೆಯಿತು. ಅಲ್ಲಿ ಆರ್ಥಿಕ ಹಿಂಜರಿತವೂ ಉಂಟಾಯಿತು. ಅನೇಕರು ಉದ್ಯೋಗ ಕಳೆದುಕೊಳ್ಳುವಂತಾಯಿತು. ಆಗ ನಾನು ಕಣ್ಣಾರೆ ಕಂಡ ಸನ್ನಿವೇಶಗಳನ್ನು ನನ್ನ ಕಾದಂಬರಿಯ ವಸ್ತುವಾಗಿ ಆಯ್ಕೆ ಮಾಡಿಕೊಂಡೆ. ಅದಕ್ಕೆ ವ್ಯಾಪಕ ಮೆಚ್ಚುಗೆ ಓದುಗ ವಲಯದಿಂದ ಸಿಕ್ಕಿತು ಎಂದು ಎಂ.ಆರ್.ದತ್ತಾತ್ರಿ ಹೇಳಿದರು.