ಮದ್ಯದಂಗಡಿಗಳಲ್ಲಿ ಸ್ಟಾಕ್ ಕೊರತೆ

drinks jan 08
Published on

ಬೆಂಗಳೂರು: ರಾಜ್ಯ ಸರ್ಕಾರ ಕೆಲ ಮದ್ಯದ ದರ ಕಡಿಮೆ ಮತ್ತು ಜಾಸ್ತಿ ಮಾಡಿ ಆದೇಶ ಮಾಡಿದೆ. ಆದರೆ, ಹೊಸ ದರದ ಲೇಬಲ್ಗಳನ್ನು ಹಾಕಲು ಸಮಯ ಬೇಕಿರುವುದರಿಂದ ಹೊಸ ಮದ್ಯ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಇದರಿಂದ ಒಂದು ಕಡೆ ಅಬಕಾರಿ ಇಲಾಖೆಗೆ ನಷ್ಟ, ಮತ್ತೊಂದು ಕಡೆ ಮದ್ಯಪ್ರಿಯರಿಗೆ ತಮ್ಮ ಅಚ್ಚುಮೆಚ್ಚಿನ ಬ್ರ್ಯಾಂಡ್ ಸಿಗುತ್ತಿಲ್ಲ.
ಮದ್ಯಕ್ಕೆ ಹೊಸ ಬೆಲೆ ಆದೇಶ ಜಾರಿಯಾದ ಬೆನ್ನಲ್ಲೇ ಕೆಎಸ್‌ಬಿಸಿಎಲ್ನಿಂದ ಹೊಸ ದರ ಅಳವಡಿಸಿದ ಮದ್ಯದ ಬಾಟಲ್ಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇತ್ತೀಚೆಗೆ ಪ್ರೀಮಿಯಂ ಮದ್ಯಗಳ ಬೆಲೆಯನ್ನು ಸರ್ಕಾರ ಕಡಿಮೆ ಹಾಗೂ ಅಗ್ಗದ ಮದ್ಯಗಳ ದರವನ್ನು ಕೊಂಚ ಏರಿಕೆ ಮಾಡಿತ್ತು. ಇದರಿಂದ ಮದ್ಯದಂಗಡಿಗಳಲ್ಲಿ ಸ್ಟಾಕ್ ಕೊರತೆ ಕಂಡುಬಂದಿದೆ.
ಬೆಲೆ ಇಳಿಕೆ ಮತ್ತು ಏರಿಕೆಯಾಗಿದ್ದರಿಂದ ಹೊಸ ಲೇಬಲಿಂಗ್ ಮಾಡುವ ಕಾರ್ಯಕ್ಕೆ ಸಮಯ ಬೇಕಿರುವುದರಿಂದ ಹೊಸ ಮದ್ಯೆ ಪೂರೈಕೆ ಆಗುತ್ತಿಲ್ಲ. ಇದರಿಂದ ಯಾವುದೇ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಲ್ಲೂ ಸರಿಯಾಗಿ ಮದ್ಯ ಸರಬರಾಜು ಆಗುತ್ತಿಲ್ಲ ಎಂದು ಮದ್ಯ ಮಾರಾಟಗಾರರು ತಿಳಿಸಿದ್ದಾರೆ.
ಇನ್ನು ಅಕ್ಕಪಕ್ಕದ ರಾಜ್ಯಗಳ ಮದ್ಯದ ದರ ಪರಿಶೀಲಿಸಿ ನಮ್ಮಲ್ಲಿ ದುಬಾರಿ ಮದ್ಯಗಳ ದರವನ್ನು ಇತ್ತೀಚೆಗೆ ಸ್ವಲ್ಪ ಕಡಿಮೆ ಮಾಡಲಾಗಿದೆ. ಹೊಸ ದರದಂತೆ ಲೇಬಲ್ ಮುದ್ರಿಸಬೇಕಿದ್ದು, ಇದಕ್ಕೆ ಕಾಲಾವಕಾಶ ಬೇಕಿರುವುದರಿಂದ ಮಾರಾಟಗಾರರಿಗೆ ಕೆಲ ಬ್ರಾಂಡ್ ಮದ್ಯ ಅಗತ್ಯಕ್ಕೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ವೈನ್ ಸ್ಟೋರ್, ಬಾರ್ ಸೇರಿದಂತೆ ಮದ್ಯದಂಗಡಿಗಳಲ್ಲಿ ಮಾರಾಟ ಕಡಿಮೆಯಾಗಿದ್ದು, ಅಬಕಾರಿ ಆದಾಯಕ್ಕೆ ಸ್ವಲ್ಪ ಹಿನ್ನಡೆ ಉಂಟಾಗಿದೆ.
ಬ್ಲ್ಯಾಕ್ ಆ್ಯಂಡ್ ವೈಟ್, ಬ್ಲ್ಯಾಕ್ ಡಾಗ್, ಟೀಚರ್ಸ್, ಬ್ಲ್ಯಾಕ್ ಲೇಬಲ್, ಶಿವಾಸ್ ರೀಗಲ್, ಸ್ವಿರ್ನಾಫ್ ವೋಡ್ಕಾ ಸೇರಿದಂತೆ ಪ್ರೀಮಿಯಂ ಮತ್ತು ಸೆಮಿ ಪ್ರೀಮಿಯಂನ ಹಲವು ಬ್ರಾಂಡ್‌ಗಳ ಮದ್ಯ ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net