ಕ್ಯಾಲನೂರಿನಲ್ಲಿ ಸ್ವಚ್ಛತೆ ಕೊರತೆ; ಪ್ರಮುಖ ರಸ್ತೆಯಲ್ಲಿ ಕಸ

ತರೀಕೆರೆಯ ರಾಜುಕಾಲುವೆಯಲ್ಲಿ ಹರಿಯುವ ನೀರಿಗೆ ಸೇರಿರುವ ಗ್ರಾಮದ ಕಸ, ಚರಂಡಿ ನೀರು, ಮಾಂಸದ ತ್ಯಾಜ್ಯ.
ತರೀಕೆರೆಯ ರಾಜುಕಾಲುವೆಯಲ್ಲಿ ಹರಿಯುವ ನೀರಿಗೆ ಸೇರಿರುವ ಗ್ರಾಮದ ಕಸ, ಚರಂಡಿ ನೀರು, ಮಾಂಸದ ತ್ಯಾಜ್ಯ.
Published on

ಕ್ಯಾಲನೂರು: ಕೋಲಾರ ತಾಲೂಕಿನ ಕ್ಯಾಲನೂರು ಗ್ರಾಮದಿಂದ ಕರೇನಹಳ್ಳಿ, ತಿಪ್ಪೇನಹಳ್ಳಿ, ಬೈರಂಡಹಳ್ಳಿ ಸಂಪರ್ಕ ರಸ್ತೆ ಹಾಗೂ ರಾಜಕಾಲುವೆ ಕಸದಿಂದ ತುಂಬಿದೆ. ದುರ್ವಾಸನೆಯಾದ ರೇಷ್ಮೆ ಮಾರುಕಟ್ಟೆಗೆ ಬರುವ ವ್ಯಾಪಾರಸ್ಥರು, ವಾಹನ ಸವಾರರು, ವಿದ್ಯಾರ್ಥಿಗಳು, ರೈತರು ಮೂಗು ಮುಚ್ಚಿಕೊಂಡೇ ತಿರುಗಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಒಂದೆಡೆ ಕಸದ ರಾಶಿ, ಇನ್ನೊಂದೆಡೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಲಾಗುತ್ತಿದೆ. ಮಾಂಸದ ತುಂಡುಗಳಿಗೆ ಬೀದಿ ನಾಯಿಗಳು ಮುಗಿಬೀಳುತ್ತಿದ್ದು, ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ. ಈ ರಸ್ತೆಯಲ್ಲಿ ಸಂಚರಿಸಲು ಜನ ಭಯಪಡುವಂತಾಗಿದೆ.

ರಾಜಕಾಲುವೆಗೆ ಮಾಂಸದ ತ್ಯಾಜ್ಯ: ಕಸ, ಚರಂಡಿ ತ್ಯಾಜ್ಯದೊಂದಿಗೆ ಮಾಂಸದಗಂಡಿಗಳ ತ್ಯಾಜ್ಯವೂ ರಾಜಕಾಲುವೆ ಮೂಲಕ ಕೆರೆ ಸೇರುತ್ತಿದೆ. ಈ ಕೆರೆ ನೀರು ಸೇವಿಸುವ ಜಾನುವಾರುಗಳು ಕಾಯಿಲೆಗೆ ತುತ್ತಾಗುತ್ತಿವೆ. ಹೀಗಾಗಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

ಗ್ರಾಮ ಪಂಚಾಯಿತಿ ವಿಫಲ: ಗ್ರಾಮಸ್ಥರಿಗೆ ಕಸದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಗ್ರಾಪಂ ಅಧಿಕಾರಿ, ಅಧ್ಯಕ್ಷರು, ಸಿಬ್ಬಂದಿ ವಿಲರಾಗಿದ್ದಾರೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯುತ್ತಾರೆ. ಹೀಗೆ ಎಸೆದ ತ್ಯಾಜ್ಯ ಎತ್ತಲು ಗ್ರಾಪಂ ಕ್ರಮ ಕೈಗೊಳ್ಳುತ್ತಿಲ್ಲ.

ನೇಪಥ್ಯಕ್ಕೆ ಸರಿದ ಸ್ವಚ್ಛ ಭಾರತ ಅಭಿಯಾನ: ಗ್ರಾಮಗಳಲ್ಲಿ ನೈರ್ಮಲ್ಯದ ಅರಿವು ಮೂಡಿಸುವುದಕ್ಕಾಗಿ ಸರ್ಕಾರವು ಜಾರಿಗೊಳಿಸಿರುವ ಸ್ವಚ್ಛ ಭಾರತ ಅಭಿಯಾನ ಇಲ್ಲಿ ನೇಪಥ್ಯಕ್ಕೆ ಸರಿದಿದೆೆ. ಈ ಯೋಜನೆಗಾಗಿ ಅನುದಾನ ಬಿಡುಗಡೆಯಾದರೂ ಗ್ರಾಪಂ ತಮಗೆ ಯಾವುದೇ ಸಂಬಂಧವಿಲ್ಲ ಎಂಬಂತೆ ನಿರ್ಲಕ್ಷ್ಯ ವಹಿಸಿದೆ.

ಗ್ರಾಮಸ್ಥರ ಅಳಲು: ಈ ರಸ್ತೆಯ ಮುಖಾಂತರ ತೋಟ, ಗದ್ದೆಗಳಿಗೆ ಹೋಗುವವರೂ ಕೊಳೆತ ಕಸದಿಂದಾಗಿ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಿದೆ. ನಾಯಿಗಳ    ಹಿಂಡು ಯಾವಾಗ ದಾಳಿ ಮಾಡುತ್ತವೆ ಎಂಬ ಭಯದಲ್ಲಿಯೇ ಓಡಾಡುವಂತಾಗಿದೆೆ. ಗ್ರಾಪಂ ಅಧಿಕಾರಿಗಳು, ಅಧ್ಯಕ್ಷರಿಗೆ ತಿಳಿಸಿದರೆ ಸಾರ್ವಜನಿಕರಿಗೆ ಸ್ಪಂದಿಸದೆ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಅಳಲು.

ಸಂಪರ್ಕಕ್ಕೆ ಸಿಗದ ಪಿಡಿಒ: ಗ್ರಾಮಸ್ಥರ ಕೋರಿಕೆ ಮೇಲೆ ಸಮಸ್ಯೆ ಅರಿತ ಪತ್ರಿಕೆಯು ಪಿಡಿಒ ಅಧಿಕಾರಿ ಮುನಿರಾಜು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಕಚೇರಿಯಲ್ಲೂ ಕಾಣದೆ ಫೋನ್​ಗೂ ಸಿಕ್ಕಿಲ್ಲ.

ಕಸ ವಿಲೇವಾರಿ ಕುರಿತು ಮಾಹಿತಿ ಒದಗಿಸಿದ್ದು, ಗ್ರಾಪಂ ಅಧಿಕಾರಿಗಳಿಗೆ ಸಮಸ್ಯೆ ಸರಿಪಡಿಸಲು ತಿಳಿಸಿದ್ದೇನೆ. ಅದರಂತೆ ಒಂದೆರೆಡು ಬಾರಿ ಸ್ವಚ್ಛಗೊಳಿಸಿದ್ದಾರೆ. ಆದರೆ ಸಾರ್ವಜನಿಕರು ಸ್ವಚ್ಛತೆ ಬಗ್ಗೆ ಜಾಗರೂಕರಾಗುತ್ತಿಲ್ಲ. ಎಷ್ಟು ಹೇಳಿದರೂ ಕೇಳದೆ ಎಲ್ಲೆಂದರಲ್ಲಿ ಕಸ ಹಾಕುತ್ತಾರೆ.

| ಮುನಿಯಪ್ಪ, ತಾಪಂ, ಇಒ

ಗ್ರಾಮ ಪಂಚಾಯಿತಿಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಕೆಲಸ ವಿಳಂಬವಾಗುತ್ತಿದೆ. ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, ಅನುದಾನ ಬಂದ ಬಳಿಕ ಕಸ ವಿಲೇವಾರಿ ಮಾಡುತ್ತೇವೆ.

| ರಮೇಶ್​, ಗ್ರಾಪಂ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net