ಮೋಹನ್​ಲಾಲ್​ ಅಭಿನಯದ 'L2 ಎಂಪುರಾನ್​' ಟ್ರೈಲರ್​ ರಿಲೀಸ್ ​; Empuraan

mohanlal
Published on

Empuraan: 2019 ರಲ್ಲಿ ಬಿಡುಗಡೆ ಆಗಿದ್ದ ಮೋಹನ್​ಲಾಲ್ ನಟನೆಯ ಲೂಸಿಫರ್​ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್​ ಆಗಿತ್ತು. ಮಲಯಾಳಂ ಮಾತ್ರ ಅಲ್ಲದೆ ಬೇರೆ ಭಾಷೆಗಳಿಗೆ ಡಬ್ ಆಗಿ ಸಿನಿಮಾ ಬ್ಲಾಕ್ ಬಸ್ಟರ್ ಆಗಿ, ತೆಲುಗಿಗೆ ರೀಮೇಕ್ ಸಹ ಆಗಿತ್ತು. ರಾಜಕೀಯ ಷಡ್ಯಂತ್ಯಗಳು, ಕೌಟುಂಬಿಕ ತಾಕಲಾಟ, ಸಂಬಂಧಗಳ ನಡುವಿನ ಸಿಕ್ಕುಗಳು, ಭಾವುಕತೆ, ರಾಷ್ಟ್ರೀಯತೆ ಜೊತೆಗೆ ಅದ್ಧೂರಿ ಆಕ್ಷನ್ ಎಲ್ಲವೂ ಇತ್ತು. ಮಲಯಾಳಂ ಚಿತ್ರರಂಗದ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಈ ಸಿನಿಮಾ ನಿರ್ದೇಶಿಸಿ, ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಇದೇ ಸಿನಿಮಾದ ಎರಡನೇ ಭಾಗ ಬರುತ್ತಿದ್ದು, ಇಂದು ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ.

'L2: ಎಂಪುರಾನ್' ಎಂದು ಈ ಸಿನಿಮಾಕ್ಕೆ ಹೆಸರಿಡಲಾಗಿದ್ದು, ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದೆ. 2019 ರಲ್ಲಿ ಬಿಡುಗಡೆ ಆಗಿದ್ದ ಲೂಸಿಫರ್​ ಸಿನಿಮಾದ ಸೂತ್ರವನ್ನೇ ಇಲ್ಲೂ ಬಳಸಲಾಗಿದೆ. ಆದರೆ ಇನ್ನಷ್ಟು ದೊಡ್ಡದಾಗಿ ಪ್ರಚಾರವನ್ನು ಮಾಡಿರುವುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ. ಮೊದಲ ಲೂಸಿಫರ್​ ಸಿನಿಮಾದಲ್ಲಿ ನಾಯಕನ ಉದ್ದೇಶ ತನ್ನ ಕುಟುಂಬ, ತನ್ನ ತಂದೆ ಕಟ್ಟಿದ ಪಕ್ಷವನ್ನು ಉಳಿಸುವುದಾಗಿತ್ತು. ಆದರೆ ಈ ಬಾರಿ ಇಡೀ ರಾಜ್ಯವನ್ನೇ ಉಳಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾನೆ. ಮಾತ್ರವಲ್ಲದೆ ನಾಯಕನ ಮಾಫಿಯಾ ಜಗತ್ತು ಲಂಡನ್, ಟರ್ಕಿಗಳನ್ನು ಸಹ ದಾಟಿದೆ. ಸಿನಿಮಾದಲ್ಲಿ ನಾಯಕ ಈಗ ಭಯೋತ್ಪಾದಕರ ವಿರುದ್ಧವೂ ಹೋರಾಡಲಿದ್ದಾನೆ.

ಸಿನಿಮಾದ ಟ್ರೈಲರ್ ಮಲಯಾಳಂ ಸೇರಿದಂತೆ ಇನ್ನೂ ಕೆಲ ಭಾಷೆಗಳಲ್ಲಿ ಬಿಡುಗಡೆ ಆಗಿದ್ದು, ಸಿನಿಮಾದ ಬಿಡುಗಡೆಯನ್ನು ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಮಾಡಲಾಗುತ್ತಿದೆ. ಸಿನಿಮಾದ ನಿರ್ದೇಶನವನ್ನು ಪೃಥ್ವಿರಾಜ್ ಸುಕುಮಾರ್ ಮಾಡಿದ್ದು, ಈ ಸಿನಿಮಾದಲ್ಲಿಯೂ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಟ್ರೈಲರ್​ನ ಕೆಲವು ದೃಶ್ಯಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಮೋಹನ್ ಲಾಲ್ ಅವರ ಆಪ್ತ ಆಂಟೊನಿ ಪೆರಂಬೂರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.

'L2: ಎಂಪುರಾನ್' ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ಆಗಿದೆ. ಮೊದಲ ಭಾಗದಲ್ಲಿ ಇದ್ದ ಹಲವು ಪಾತ್ರಗಳು ಎರಡನೇ ಭಾಗದಲ್ಲಿಯೂ ಇವೆ. ಟೊವಿನೋ ಥಾಮಸ್, ಮಂಜು ವಾರಿಯರ್ ಸೇರಿದಂತೆ ಇನ್ನೂ ಕೆಲವು ಪಾತ್ರಗಳು ಈ ಸಿನಿಮಾದಲ್ಲಿಯೂ ಇವೆ. ಇದರ ಜೊತೆಗೆ ಇನ್ನಷ್ಟು ಹೊಸ ಪಾತ್ರಗಳು ಸಹ ಸೇರಿಕೊಂಡಿವೆ. ಕನ್ನಡದ ನಟ ಕಿಶೋರ್ ಅವರು ಸಹ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದು, ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ 'L2: ಎಂಪುರಾನ್' ಸಿನಿಮಾ ಇದೇ ತಿಂಗಳ 27 ರಂದು ಬಿಡುಗಡೆ ಕಾಣಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net