ಕೇಂದ್ರದ ಹೊಸ ಆದೇಶದಿಂದ ಎಲ್​ಎಂವಿ ಡಿಎಲ್ ಗೊಂದಲ; ಸ್ಪಷ್ಟನೆ ಕೇಳಿ ರಾಜ್ಯದ ಪತ್ರ

DL 7
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಲಘು ಮೋಟಾರು ವಾಹನ (ಎಲ್​ಎಂವಿ) ಚಾಲನಾ ಪರವಾನಗಿ (ಡಿಎಲ್) ಪಡೆದಿರುವ ವ್ಯಕ್ತಿ ಸಾರಿಗೆ/ಗೂಡ್ಸ್ ವಾಹನಗಳನ್ನೂ ಓಡಿಸಲು ಅವಕಾಶ ಕಲ್ಪಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ. ಆದರೆ, ಈ ಹೊಸ ಆದೇಶದಿಂದ ಡಿಎಲ್ ವಿತರಣೆ ಪ್ರಕ್ರಿಯೆಯಲ್ಲಿ ಹಲವು ಗೊಂದಲ ಶುರುವಾಗಿದ್ದು, ಸ್ಪಷ್ಟನೆ ಕೇಳಿ ರಾಜ್ಯ ಸಾರಿಗೆ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಸದ್ಯ ಜಾರಿಯಲ್ಲಿರುವಂತೆ ಎಲ್​ಎಂವಿ ಹಾಗೂ ಟ್ರಾನ್ಸ್​ಪೋರ್ಟ್ ವಾಹನಗಳ ಚಾಲನೆಗೆ ಪ್ರತ್ಯೇಕ ಚಾಲನಾ ಪರವಾನಗಿ ಪಡೆಬೇಕು. ಇನ್ನು ಮುಂದೆ ಎಲ್​ಎಂವಿ ಡಿಎಲ್ ಪರಿಗಣಿಸುವಂತೆ ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸ ನಿಯಮ ಪಾಲಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ನೂತನ ನಿಯಮ ಪಾಲಿಸಿದರೆ ಕೇಂದ್ರ ಸರ್ಕಾರವೇ ರೂಪಿಸಿರುವ ಮೋಟಾರು ವಾಹನ ಕಾಯ್ದೆಯ ನಿಯಮಗಳೇ ಉಲ್ಲಂಘನೆಯಾಗುತ್ತದೆ.

ಯಾವ ವಾಹನಕ್ಕನ್ವಯ?: ಮೋಟಾರು ಸೈಕಲ್, ಟ್ಯಾಕ್ಸಿ, ಕ್ಯಾಬ್, ಟ್ರಾ್ಯಕ್ಟರ್, ಗೂಡ್ಸ್, ಪ್ಯಾಸೆಂಜರ್ ಲಘು ಮೋಟಾರು ವಾಹನ, ಇ ರಿಕ್ಷಾಕ್ಕೆ ಎಲ್​ಎಂವಿ ಡಿಎಲ್ ಸಾಕು. ಪ್ರತ್ಯೇಕ ಅನುಮತಿ ಪತ್ರ ಬೇಕಿಲ್ಲ.

ಸುಪ್ರೀಂ ವ್ಯಾಖ್ಯಾನವೇನು?

8 ರೀತಿಯ ವಾಹನಗಳೂ ಲಘು ಮೋಟಾರು ವಾಹನಗಳೇ ಎಂದು ಮೋಟಾರು ವಾಹನ ಕಾಯ್ದೆಯಲ್ಲಿ ಪರಿಗಣಿಸುತ್ತಿರುವಾಗ ಬೇರೆ ಬೇರೆ ಡಿಎಲ್ ಅಗತ್ಯ ಏನಿದೆ. ಎಲ್ಲವನ್ನೂ ವಿಲೀನಗೊಳಿಸಿ ಎಲ್ಲದಕ್ಕೂ ಒಂದೇ ಎಲ್​ಎಂವಿ ಡಿಎಲ್ ಕೊಡಿ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ವ್ಯಾಖ್ಯಾನಿಸಿದೆ.

ಗೊಂದಲಗಳೇನು?
  • 18 ವರ್ಷಕ್ಕೆ ಎಲ್​ಎಂವಿ ಡಿಎಲ್ ಸಿಗುತ್ತೆ. ಗೂಡ್ಸ್ ವಾಹನಕ್ಕೆ 20 ವರ್ಷ ಆಗಿರಬೇಕು
  • ಟ್ರಾನ್ಸ್​ಪೋರ್ಟ್ ವಾಹನ ಚಲಾಯಿಸಲು ಆರ್​ಟಿಒ ಪತ್ಯೇಕ ಅನುಮತಿ ಪತ್ರ ಬೇಕು
  • ನೂತನ ನಿಯಮ ಅನುಷ್ಠಾನ ಹೇಗೆ ಮಾಡಬೇಕು ಎಂದು ರೂಪುರೇಷೆ ಸಿದ್ಧಪಡಿಸಿಲ್ಲ
  • ಈವರೆಗೆ ಯಾವ ರಾಜ್ಯದಲ್ಲೂ ಹೊಸ ನಿಯಮ ಜಾರಿಯಾಗಿರುವ ಮಾಹಿತಿ ಇಲ್ಲ
  • ಕಾರು ಚಾಲನೆಗೂ ಟ್ರಾ್ಯಕ್ಟರ್ ಚಾಲನೆಗೂ ವ್ಯತ್ಯಾಸವಿದೆ, ಎರಡೂ ಬೇರೆ ವಾಹನ

ಕೆಲ ಸೆಕ್ಷನ್​ಗಳ ತಿದ್ದುಪಡಿ ಬಗ್ಗೆ ಗೊಂದಲಗಳಿದ್ದು, ಸ್ಪಷ್ಟನೆ ಕೇಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯದಲ್ಲಿ ಗೊಂದಲರಹಿತ ಹೊಸ ನಿಯಮ ಜಾರಿಗೆ ತರಲಾಗುತ್ತದೆ.

| ಶಿವರಾಜಪಾಟೀಲ್, ಹೆಚ್ಚುವರಿ ಆಯುಕ್ತ, ಸಾರಿಗೆ ಇಲಾಖೆ

ಕೇಂದ್ರದ ನಿಯಮವೇ ಉಲ್ಲಂಘನೆ ಆಗುತ್ತೆ

ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ಎಲ್​ಎಂವಿ ವಾಹನಕ್ಕೆ ಡಿಎಲ್ ಕೊಟ್ಟ 1 ವರ್ಷದ ನಂತರ ವಾಣಿಜ್ಯ ವಾಹನ ಚಾಲನೆಗೆ ಅನುಮತಿ ಪತ್ರ ಕೊಡಬೇಕು. ಒಂದು ವೇಳೆ ಈಗ ಹೊಸ ಆದೇಶವನ್ನು ಪಾಲಿಸದರೆ ಕೇಂದ್ರ ಸರ್ಕಾರದ ನಿಯಮವನ್ನೇ ಉಲ್ಲಂಘಿಸಿದಂತಾಗುತ್ತದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸಾರಿಗೆ ಇಲಾಖೆ ಪತ್ರ ಬರೆದಿದೆ.

ಅನುಕೂಲವೇನು?
  • ಡಿಎಲ್ ಹೊಂದಿರುವವರು ಪದೇಪದೆ ಆರ್​ಟಿಒ ಕಚೇರಿಗಳಿಗೆ ಹೋಗಬೇಕಿಲ್ಲ
  • ಆರ್​ಟಿಒ ಅಧಿಕಾರಿಗಳು ಪ್ರತಿಬಾರಿ ಹಿಂಬರಹ ಬರೆದುಕೊಡುವ ಪ್ರಮೇಯವಿಲ್ಲ
  • ಒಂದೊಂದು ಕೆಟಗರಿ ವಾಹನಕ್ಕೆ ಒಂದೊಂದು ರೀತಿ ಅನುಮತಿ ಪಡೆಯಬೇಕಿಲ್ಲ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net