

ಶೃಂಗೇರಿ: ಮನುಜ ಮತ ವಿಶ್ವಪಥ ಎಂದ ಕುವೆಂಪು ಅವರ ಮಾನವೀಯ ಮೌಲ್ಯ ಇಂದಿಗೂ ಪ್ರಸ್ತುತ. ಬಸವಣ್ಣ, ಬುದ್ದ, ಕೆಂಪೇಗೌಡ, ಕನಕದಾಸ, ವಾಲ್ಮೀಕಿ, ಮಡಿವಾಳ, ಮಾಚಿದೇವ ಎಲ್ಲರೂ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲರೂ ವಿಶಾಲ ದೃಷ್ಟಿಯಿಂದ ಸಮಾಜದ ಅಭಿವೃದ್ಧಿಗಾಗಿ ದುಡಿದವರುಎಂದು ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ಶೃಂಗೇರಿ ಬಿಜಿಎಸ್ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಸಿರಿಗನ್ನಡ ವೇದಿಕೆ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ರಾಮಾಯಣ ದರ್ಶನಂ ಅಮೂಲ್ಯ ಕೃತಿಯಾಗಿದೆ. ಕುವೆಂಪು ಹಲವಾರು ಗ್ರಂಥಗಳನ್ನು ರಚಿಸಿ ಜಗತ್ತಿಗೆ ಉನ್ನತ ಸಂದೇಶ ನೀಡಿದ್ದಾರೆ. ಇಂತಹ ಮಹನೀಯರು ಮಾಡಿದ ಸಾಧನೆ ಮೈಗೂಡಿಸಿಕೊಂಡಾಗ ಮನುಷ್ಯನ ಜೀವನಕ್ಕೆ ಅರ್ಥ ಬರುತ್ತದೆ ಎಂದರು.
ರಾಮನ ವ್ಯಕ್ತಿತ್ವವನ್ನು ರಾಮಾಯಣ ದರ್ಶನಂ ಎಂಬ ಮಹಾಕಾವ್ಯದಲ್ಲಿ ಬಿಂಬಿಸಿ ಅದರ ಮೌಲ್ಯವನ್ನು ಜನ ಸಾಮಾನ್ಯರಿಗೂ ತಲುಪಿಸಿದರು. ಶಿಕ್ಷಣ, ಸಂಸ್ಕಾರ ಜೀವನದ ಉತ್ಕೃಷ್ಟ ಮೌಲ್ಯಗಳು. ಶಿಕ್ಷಣದಿಂದ ವಿವೇಚನೆ, ವಿಶಾಲತೆ ಪರಿಮೂಡಿದಾಗ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ಸಾಧ್ಯ ಎಂದರು.
ಬಿಜಿಎಸ್ ಕಾಲೇಜಿನ ಪ್ರಾಚಾರ್ಯ ಕೆ.ಸಿ ನಾಗೇಶ್ ಮಾತನಾಡಿ, ಕುವೆಂಪು ಓರ್ವ ಮಹಾನ್ ವ್ಯಕ್ತಿ. ದೇಶ, ಕಾಲ, ಜನಾಂಗ ಎಲ್ಲವನ್ನು ಮೀರಿ ಗೌರವಕ್ಕೆ ಪಾತ್ರರಾದ ಅಪರೂಪದ ಕವಿ. ಜ್ಞಾನದ ಸಿದ್ಧಿ ಪಡೆದು ಜಗತ್ತಿನ ಆದರ್ಶ ವ್ಯಕ್ತಿಯಾಗಿ ಬೆಳೆದವರು. ವಿಶ್ವ ಮಾನವ ಅಲ್ಪಮಾನವನಾಗ ಬಾರದು ಎಂದು ಅವರು ನೀಡಿದ ಸಂದೇಶ ಚಿರನೂತನ ಎಂದರು.
ಸಿರಿಗನ್ನಡ ವೇದಿಕೆ ನೂತನ ಅಧ್ಯಕ್ಷ ಎಚ್.ಎ.ಪ್ರಕಾಶ್ ಮಾತನಾಡಿ, ಜಾತಿ, ಮತ, ಪಂಥಗಳಿಗಿಂತ ಮಿಗಿಲಾಗಿರುವುದು ಮಾನವೀಯ ಮೌಲ್ಯ. ಅಧುನಿಕ ಜೀವನದಲ್ಲಿ ಮೌಲ್ಯಗಳು ಮರೆಯಾಗಿವೆ. ಭಗವತ್ ಚಿಂತನೆ, ಮಾನವ ಪ್ರೇಮ, ಸಮಾನತೆ ಇತ್ಯಾದಿ ಉನ್ನತ ಭಾವನೆಗಳನ್ನು ನಾವು ಬೆಳೆಸಿಕೊಂಡಾಗ ಮಾತ್ರ ಸಮಾಜದ ಉನ್ನತಿ ಸಾಧ್ಯ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕುವೆಂಪು ಗೀತಾ ಗಾಯನ ನೆರವೇರಿತು. ಸಿರಿಗನ್ನಡ ವೇದಿಕೆ ಕೊಪ್ಪ ಘಟಕದ ಅಧ್ಯಕ್ಷ ಚಾವಲಮನೆ ಸುರೇಶ್ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜಿ ರಾಘವೇಂದ್ರ, ಸಿರಿಗನ್ನಡ ವೇದಿಕೆ ಪದಾಧಿಕಾರಿಗಳಾದ ಶಶಿಧರ್, ಛಾಯಪತಿ, ರಮೇಶ್, ಮಂಜುನಾಥ ಗೌಡ, ಅಂಬಲಮನೆ ಸುಬ್ರಹ್ಮಣ್ಯ, ಅನಿಲ್ ಹೊಸಕೊಪ್ಪ, ಸಂತೋಷ್ ಕಾಳ್ಯ ಇದ್ದರು.