

ಶಿವಮೊಗ್ಗ: ಭವ್ಯ ಭಾರತದ ಪ್ರಜೆಗಳನ್ನು ತಯಾರು ಮಾಡುವ ಮಹತ್ತರ ಹೊಣೆ ಶಿಕ್ಷಕರ ಮೇಲಿದೆ ಎಂದು ಎಂದು ಕುವೆಂಪು ವಿವಿ ಕುಲಸಚಿವೆ ಜಿ.ಅನುರಾಧಾ ಹೇಳಿದರು.
ಕುವೆಂಪು ಶತಮಾನೋತ್ಸವ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಕುವೆಂಪು ವಿವಿಯ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕುವೆಂಪು ವಿಶ್ವವಿದ್ಯಾಲಯ ಬಿಇಡಿ ಕಾಲೇಜುಗಳ ಪ್ರಾಚಾರ್ಯರು ಮತ್ತು ಪ್ರಶಿಕ್ಷಕರ ಸಂಘ ಆಯೋಜಿಸಿದ್ದ ಎರಡು ವರ್ಷಗಳ ಬಿಇಡಿ ಪಠ್ಯಕ್ರಮ ಮಾರ್ಪಾಡು ಕುರಿತ ರಾಜ್ಯಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗಿದೆ. ಭವಿಷ್ಯದ ಶಿಕ್ಷಕರನ್ನು ತಯಾರು ಮಾಡುವ ಗುರುಗಳಿಗೆ ಜವಾಬ್ದಾರಿ ಹೆಚ್ಚಿದ್ದು, ಸಮರ್ಥವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕಿದೆ. ಉತ್ತಮ ಸಮಾಜ ರೂಪಿಸುವಲ್ಲಿ ಶಿಕ್ಷಕರ ಕೊಡುಗೆ ಅಪಾರ ಎಂದರು.
ಪದೇಪದೆ ಪಠ್ಯಕ್ರಮ ಮಾರ್ಪಾಡು ಮಾಡುವ ಅವಶ್ಯಕತೆ ಇದೆಯಾ ಎಂಬ ಬಗ್ಗೆಯೂ ಚರ್ಚೆಗಳು ನಡೆದವು. ಇದೇ ಸಂದರ್ಭದಲ್ಲಿ ಎನ್‌ಇಪಿ ಅನುಷ್ಠಾನಗೊಳ್ಳುತ್ತಿರುವ ಕಾರಣ ಕೆಲವೊಂದು ಮಾರ್ಪಾಡು ಮಾಡಿಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಕೆ.ನವೀನ್‌ಕುಮಾರ್ ಮಾತನಾಡಿ, ದೇಶ ಕಟ್ಟುವ ವಿದ್ಯಾರ್ಥಿಗಳ ಸಂಘಟನೆ ಕಟ್ಟುವವರು ಶಿಕ್ಷಕರು. ಕಲ್ಲುಗಳನ್ನು ಶಿಲೆಗಳನ್ನಾಗಿಸುವವರೂ ಶಿಕ್ಷಕರೇ ಆಗಿದ್ದಾರೆ. ವಿದ್ಯಾರ್ಥಿಗಳನ್ನು ಒಳ್ಳೆಯ ದಿಕ್ಕಿನೆಡೆಗೆ ತಲುಪಿಸದ ಶಿಕ್ಷಕ ಒಬ್ಬ ಉಗ್ರನಿಗೆ ಸಮ ಎಂದರು.
ವಿದ್ಯಾರ್ಥಿಗಳನ್ನು ಶಕ್ತಿವಂತರನ್ನಾಗಿಸಬೇಕು. ಪಠ್ಯಕ್ರಮ ಮಾರ್ಪಾಡು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಇರಬೇಕೇ ವಿನಃ ಮಾರಕ ಆಗಬಾರದು. ಆ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಕುವೆಂಪು ವಿವಿ ಶೈಕ್ಷಣಿಕ ಪರಿಷತ್ ಸದಸ್ಯ ಎಂ.ಎ.ರಮೇಶ್ ಹೆಗಡೆ ಮಾತನಾಡಿ ಕೆಲವರು ತರಗತಿಗಳಿಗೆ ಹೋಗುವುದಿಲ್ಲ. ಅವರಿಗೂ ನಿತ್ಯ ಹಾಜರಾತಿ ನೀಡಲಾಗುತ್ತಿದೆ. ತರಗತಿಗಳಿಗೆ ತೆರಳದವರು ಭವಿಷ್ಯದ ಶಿಕ್ಷಕರನ್ನು ಹೇಗೆ ತಯಾರು ಮಾಡುತ್ತಾರೆ ಎಂಬುದನ್ನು ಗಂಭೀರವಾಗಿ ಯೋಚನೆ ಮಾಡಬೇಕಿದೆ. ಈ ಬಗ್ಗೆ ವಿವಿಯಿಂದ ಸೂಕ್ತ ನಿರ್ದೇಶನ ಹೊರಬೀಳಬೇಕಿದೆ ಎಂದರು.
ವಿವಿಯ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಪ್ರೊ. ಎಸ್.ಎಸ್.ಪಾಟೀಲ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಕರು ಮನ ಮುಟ್ಟುವಂತೆ ಬೋಧನೆ ಮಾಡಬೇಕು. ಆಗ ಮಾತ್ರ ಗುರುಗಳು ಆಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು. ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎನ್.ಎಚ್.ಶ್ರೀಕಾಂತ್, ವಿವಿ ಶಿಕ್ಷಣ ವಿಭಾಗದ ಡೀನ್ ಪ್ರೊ. ಸಿ.ಗೀತಾ, ಪ್ರಾಚಾರ್ಯರು ಮತ್ತು ಪ್ರಶಿಕ್ಷಕರ ಸಂಘದ ಅಧ್ಯಕ್ಷ ಡಾ. ಹ.ಮ.ಪರಮೇಶ್ವರಪ್ಪ, ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಮಧು ಉಪಸ್ಥಿತರಿದ್ದರು.