

ಹುಣಸೂರು: ಕುವೆಂಪು ಅವರ ಕಾಲಘಟ್ಟದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಒಳಗೊಂಡ ಆಧ್ಯಾತ್ಮಿಕ ಸಾಹಿತ್ಯ ಸೃಷ್ಟಿಗೆ ಹೆಚ್ಚಿನ ಮಹತ್ವ ದೊರಕಿತು ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಚ್.ಆರ್.ಸಿದ್ದೇಗೌಡ ಅಭಿಪ್ರಾಯಪಟ್ಟರು.
ನಗರದ ಡೀಡ್ ಸಂಸ್ಥೆಯಲ್ಲಿ ಆದಿವಾಸಿ ಬುಡಕಟ್ಟು ಕೃಷಿಕರ ಸಂಘ, ಆದಿವಾಸಿ ಗಿರಿಜನ ಮಹಿಳಾ ಸಂಘ, ದಲಿತ ಚಳವಳಿ ನವನಿರ್ಮಾಣ ವೇದಿಕೆ ಮತ್ತು ಡೀಡ್ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕುವೆಂಪು ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುವೆಂಪು ಸಾಹಿತ್ಯ ಸಮಾಜ ಪರಿವರ್ತನೆಗೆ ದೊಡ್ಡ ಅಸ್ತ್ರವಾಗಿ ಪರಿವರ್ತಿತವಾಯಿತು. ಅಸಮಾನತೆ ತೊಡೆಯಲು ಕುವೆಂಪು ಅವರು ನಮಗೆ ದಾರಿ ದೀಪವಾಗಿದ್ದರು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಲಿತ ನವನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ, ಕುವೆಂಪು ವಿಚಾರಧಾರೆ ಮಾಸದಂತೆ ನೋಡಿಕೊಳ್ಳಬೇಕು. ಅವರ ಆಶಯದಂತೆ ಸಮಾಜದ ಅನಿಷ್ಟಗಳನ್ನು ಬೇರು ಸಮೇತ ಕಿತ್ತು ಹಾಕಲು ಶ್ರಮಿಸಬೇಕು ಎಂದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಕುವೆಂಪು ಅವರ ಸಮಕಾಲೀನ ಸಮಸ್ಯೆಗಳ ಪರಾಮರ್ಶೆ ಮತ್ತು ಅವಲೋಕನ ಸಮಾಜ ಪರಿವರ್ತನೆಗೆ ಇಂಬು ನೀಡುವ ಸಾಹಿತ್ಯವಾಗಿ ಪರಿಣಮಿಸಿತು. ಕುವೆಂಪು ಅವರ ಸರ್ವೋದಯ ಯುಗದ ಮಂತ್ರ ಸಾರ್ವಕಾಲಿಕ ಎಂದರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು, ಪ್ರಮುಖರಾದ ದರ್ಶನ್, ಎಚ್.ಆರ್.ದಿನೇಶ್, ಹನುಮಯ್ಯ, ಡಾ.ಕುಮುದಿನಿ, ವಕೀಲ ರಘು, ಎಚ್.ಆರ್. ಸಂದೇಶ್, ರತ್ನಮ್ಮ, ಮಾಸ್ತಮ್ಮ, ಪಾರ್ವತಿ, ಲಕ್ಷ್ಮೀ, ವಿಠಲ್, ಬೊಮ್ಮಿ, ಪ್ರಕಾಶ್, ರಕ್ಷಿತಾ, ರುಕ್ಮಿಣಿ, ಹನುಮಯ್ಯ, ಗೌತಮಿ, ಶಿವಣ್ಣ ಇತರರು ಇದ್ದರು.