

ಕುಶಾಲನಗರ : ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ನಮ್ಮ ನಡೆ ಹಸಿರೆಡೆಗೆ ‘ಗ್ರೋ ಗ್ರೀನ್’ ಅಭಿಯಾನದಡಿ ಗೌರಿ-ಗಣೇಶೋತ್ಸವ ಹಬ್ಬ ಆಚರಣೆಗೆ ಪರಿಸರ ಸ್ನೇಹಿ ನೈಸರ್ಗಿಕ ಜೇಡಿಮಣ್ಣಿನ ಗಣೇಶ ಮೂರ್ತಿಯನ್ನು ಸ್ಥಾಪಿಸುವ ಕುರಿತು ಶಾಲೆಯ ಇಕೋ ಕ್ಲಬ್, ಎನ್‌ಎಸ್‌ಎಸ್ ವತಿಯಿಂದ ಜಾಗೃತಿ ಮೂಡಿಸ ಲಾಯಿತು.
ಇಕೋ ಕ್ಲಬ್ ಉಸ್ತುವಾರಿ ಶಿಕ್ಷಕಿ ಬಿ.ಡಿ. ರಮ್ಯಾ ಮಾತನಾಡಿ, ರಾಸಾಯನಿಕ ಬಣ್ಣ ಲೇಪಿತ ಹಾಗೂ ಪಿಒಪಿ ಗಣೇಶ ಮೂರ್ತಿಯ ಬಳಕೆಯಿಂದ ಪರಿಸರಕ್ಕೆ ಉಂಟಾಗುತ್ತದೆ ಎಂದರು. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಕಾರ್ಯಕ್ರಮ ಸಂಘಟಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ನೈಸರ್ಗಿಕವಾದ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಮಾಲಿನ್ಯ ತಡೆಗಟ್ಟುವುದರೊಂದಿಗೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ಶಿಕ್ಷಕರಾದ ಕೆ. ಗೋಪಾಲಕೃಷ್ಣ, ಬಿ.ಎನ್.ಸುಜಾತ, ಎಸ್.ಎಂ.ಗೀತಾ, ಬಿ.ಎಸ್.ಅನ್ಸಿಲಾ ರೇಖಾ ಇದ್ದರು.
ಜಾಗೃತಿ ಅಭಿಯಾನದಲ್ಲಿ ವಿದ್ಯಾರ್ಥಿ ಅಜಯ್ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿ ಗಮನ ಸೆಳೆಯಿತು. ನಂತರ ಕೂಡ್ಲೂರು ಗ್ರಾಮದಲ್ಲಿ ಜನಜಾಗೃತಿ ನಡೆಸಿದ ವಿದ್ಯಾರ್ಥಿಗಳು, ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸಿ, ಪ್ರತಿಷ್ಠಾಪಿಸಲು ಮನವಿ ಮಾಡಿದರು.