

ಕಡೂರು: ತಾಲೂಕಿನ ಕುರುಬ ಸಮಾಜದ ಚಟುವಟಿಕೆಗಳಿಗಾಗಿ ಸ್ವಂತ ಸಮುದಾಯ ಭವನ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ತಾಲೂಕು ಕನಕ ನೌಕರರ ಸಂಘ ಏರ್ಪಡಿಸಿದ್ದ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಶಾಸಕರು ಮತ್ತು ಪುರಸಭಾ ಅಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನ ಅಭಿವೃದ್ಧಿಯಲ್ಲಿ ಕುರುಬ ಸಮಾಜದಿಂದ ಆಯ್ಕೆಯಾದ ಜನಪ್ರತಿನಿಧಿಗಳ ಕೊಡುಗೆ ಹಿರಿದು. ಶಾಸಕನಾಗಿ ಆಯ್ಕೆಯಾದ ನಂತರ ಕ್ಷೇತ್ರದ ಮರವಂಜಿ, ಮತಿಘಟ್ಟ, ಆಸಂದಿ, ಹಳೇಸಿದ್ದರಹಳ್ಳಿ, ಕಡೂರಹಳ್ಳಿ, ಹರುವನಹಳ್ಳಿ, ಸೀಗೇಹಡ್ಲು, ಯಗಟಿ, ಗರ್ಜೆ ಗ್ರಾಮಗಳಲ್ಲಿನ ಸಮುದಾಯ ಭವನಗಳಿಗೆ ತಲಾ 20 ಲಕ್ಷ ರೂ. ಅನುದಾನ ನೀಡಲಾಗಿದೆ. ಪಟ್ಟಣದಲ್ಲಿ ಕುರುಬ ಸಮುದಾಯ ಭವನಕ್ಕೆ ವಿಶಾಲ ನಿವೇಶನ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಕುರುಬ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸೋಣ ಎಂದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಪುರಸಭೆ ಅಧ್ಯಕ್ಷನಾಗಿ ಹಲವಾರು ಸಮಾಜಗಳ ಅಭಿವೃದ್ಧಿಗೆ ನಿವೇಶನ ದೊರಕಿಸಿ ಕೊಡಲಾಗಿದೆಯಾದರೂ ಕುರುಬ ಸಮಾಜಕ್ಕೆ ಇನ್ನೂ ನಿವೇಶನ ನೀಡಿಲ್ಲ. ಪಟ್ಟಣದೊಳಗೆ ಸೂಕ್ತ ನಿವೇಶನ ಒದಗಿಸಿ ಕುರುಬ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರೊಂದಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದರು.
ಸಂಘದ ಅಧ್ಯಕ್ಷ ತಿಪ್ಪೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಹರೀಶ್, ಸಂಘದ ಸಲಹೆಗಾರರಾದ ಉಡುಗೆರೆ ರೇವಣ್ಣ, ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಸವರಾಜ್, ರವಿಕುಮಾರ್, ಬಿಳುವಾಲ ಆನಂದ್, ರಾಜಪ್ಪ , ಕೆ.ಆರ್. ಸುರೇಶ್ ಇದ್ದರು.