ಬೆಳಗಾವಿಯಲ್ಲಿ ಅ.3ರಂದು ಕುರುಬರ ರಾಷ್ಟ್ರೀಯ ಮಹಾ ಅಧಿವೇಶನ

Shepherds india international office bearers press meet
Published on

ಬೆಂಗಳೂರು: ರಾಜಕೀಯ ಅಧಿಕಾರ, ಸಂಘಟನಾತ್ಮಕ ಬೆಳವಣಿಗೆ, ಭವಿಷ್ಯದ ನಡೆಗೆ ನಿರ್ದಿಷ್ಟ ಕಾರ್ಯತಂತ್ರ ರೂಪಿಸಲೆಂದು ಬೆಳಗಾವಿಯಲ್ಲಿ ಅ.3ರಂದು ಕುರುಬ ಸಮುದಾಯದ ರಾಷ್ಟ್ರೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಶೆರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಚ್.ಎಂ.ರೇವಣ್ಣ ಜಂಟಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಮಾಹಿತಿ ನೀಡಿ, ಸಂಸ್ಥೆಯ 9ನೇ ವಾರ್ಷಿಕ ರಾಷ್ಟ್ರೀಯ ಪ್ರತಿನಿಧಿಗಳ ಮಹಾ ಸಮಾವೇಶ ಇದಾಗಿದೆ ಎಂದರು.

ಕುರುಬ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡಿ, ಹೊಸ ಆಶಯಗಳಿಗೆ ಹೊಂದಿಕೊಳ್ಳುವ ಹತ್ತಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವುದು ಸಮಾವೇಶದ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಿದ್ದರಾಮಯ್ಯಗೆ ರಾಷ್ಟ್ರೀಯ ಸನ್ಮಾನ

ಸಮುದಾಯದ ಅಂತಾರಾಷ್ಟ್ರೀಯ, ರಾಷ್ಟ್ರೀಯ ಪ್ರಮುಖರ ಅಪೇಕ್ಷೆಯಂತೆ ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ.

ಸಮುದಾಯದ ಹೆಮ್ಮೆ ನಾಯಕ ಎನ್ನುವುದಕ್ಕಿಂತ ದೇಶವೇ ಹೆಮ್ಮೆಪಡುವಂತಹ ಆಡಳಿತವನ್ನು ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ನೀಡಿದ್ದರು. ಎರಡನೇ ಬಾರಿ ಸಿಎಂ ಆದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಎಲ್ಲ ಸಮುದಾಯಗಳು ಪ್ರೀತಿಸುವ ಜನ ನಾಯಕರಾಗಿದ್ದಾರೆ ಎಂದು ಎಚ್.ಎಂ.ರೇವಣ್ಣ ಹೇಳಿದರು.

ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಸಮಾವೇಶ ಆಯೋಜಿಸಲಾಗುತ್ತಿದೆ. ಹರಿಯಾಣ ರಾಜ್ಯಪಾಲ ಭಂಡಾರು ದತ್ತಾತ್ರೇಯ, ಕೇಂದ್ರ ಸಚಿವರಾದ ಪ್ರೊ.ಎಸ್.ಪಿ.ಸಿಂಗ್ ಬೇಲ್, ಗ್ಗನ್ ಸಿಂಗ್ ಕುಲಸ್ತೆ, ವಿವಿಧ ರಾಜ್ಯಗಳ ಸಚಿವರು, ಸಂಸದ-ಶಾಸಕರು, ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಂಘಟನೆಗೆ ಮೇಲ್ಪಂಕ್ತಿ

ಹಲವು ನಾಯಕರು ಪ್ರಯತ್ನ, ಪರಿಶ್ರಮದ ಸಮುದಾಯದವರು ರಾಜ್ಯದಲ್ಲಿ ಸಂಘಟಿತರಾಗಲು, ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಲು ನೆರವಾಗಿದೆ. ಧಾರ್ಮಿಕ, ಸಾಂಸ್ಕೃತಿಕ ಮಹತ್ವವನ್ನು ಅರಿಯಲು ಸಾಧ್ಯವಾಗಿದ್ದು, ಜೀವನಮಟ್ಟ ಸುಧಾರಣೆ ಪ್ರಯತ್ನ ನಿರಂತರವಾಗಿ ಸಾಗಿವೆ.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ದಿಸೆಯಲ್ಲಿ ಕುಲಶಾಸೀಯ ಅಧ್ಯಯನ ಮುಗಿದು ವರದಿ ಸಲ್ಲಿಕೆಯಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಲಾಗಿದೆ.

ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಕೋರಿ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಶಿಾರಸು ಮಾಡಿದ್ದು, ಇದಕ್ಕಾಗಿ ನಡೆದ ಹೋರಾಟ ಮಹತ್ವದ ತಿರುವು ಪಡೆದುಕೊಂಡಿದೆ ಎಂದರು.

ಶೆರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ವಿವಿಧ ರಾಜ್ಯಗಳಲ್ಲಿ ನಡೆಸಿದ ಸಮಾವೇಶ, ಆಗ್ರಹದಿಂದ ಗುಜರಾತ್ ಹಿಂದುಳಿದವರ ಮೀಸಲು ಪ್ರಮಾಣ ಶೇ.27ಕ್ಕೆ ಏರಿಕೆಯಾಗಿದೆ.

ಕಾರ್ಯಕಾರಿಣಿ ಸಭೆ

ಸಮಾವೇಶದ ಮುನ್ನಾ ದಿನ ಬೆಳಗಾವಿಯಲ್ಲಿ ಶೆರ್ಡ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಕುರುಬರ ಆಶೋತ್ತರಗಳನ್ನು ರಕ್ಷಿಸುವುದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳ ಮುಂದೆ ಮಂಡಿಸಬೇಕಾದ ಬೇಡಿಕೆಗಳ ಬಗ್ಗೆ ಚರ್ಚಿಸಲಾಗುವುದು.

ಈ ಸಭೆಯಲ್ಲಿ ಅಂತಿಮಗೊಳಿಸಿದ ಬೇಡಿಕೆಗಳು, ಮುಂದಿನ ಕ್ರಮಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಿ ನಿರ್ಣಯ ಸ್ವೀಕರಿಸಲಾಗುವುದು ಎಂದು ಎಚ್.ಎಂ.ರೇವಣ್ಣ ವಿವರಿಸಿದರು. ಸಂಘಟನೆಯ ರಾಜ್ಯ ಪದಾಧಿಕಾರಿಗಳಾದ ಸಿ.ಎಂ.ನಾಗರಾಜ್, ಎಂ.ನಾಗರಾಜ್, ಡಾ.ಎಂ.ಜಯಪ್ಪ, ಬಾಬು ಎಸ್.ಜಿದ್ದೀಮನಿ, ಎನ್.ಎಚ್.ಪ್ರೇಮಲತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net