234 ಫೋನ್​ಗಳ ಸ್ಫೋಟ... ಬೆಂಕಿ ಧಗಧಗಿಸಲು ಬ್ಯಾಟರಿಗಳೇ ಕಾರಣ! ಮತ್ತೊಂದು ಅಚ್ಚರಿ ಸಂಗತಿ ಬೆಳಕಿಗೆ | Kurnool

bus
Published on

Kurnool Bus Accident: ಅ.24ರ ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರಿನಲ್ಲಿ ಖಾಸಗಿ ಬಸ್ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿಗೆ ಸಂಪೂರ್ಣ ಸುಟ್ಟು ಕರಕಲಾಯಿತು. ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತ್ತಿದ್ದ ಎಸಿ ಕೋಚ್​​ನ ಬಸ್​ನಲ್ಲಿ ಅಗ್ನಿ ಜ್ವಾಲೆಯಂತೆ ಹೊತ್ತಿಕೊಂಡ ಕಾರಣ ದುರಂತದಲ್ಲಿ 20 ಪ್ರಯಾಣಿಕರು ಉಸಿರು ಚೆಲ್ಲಿದರು. ಇನ್ನುಳಿದ 26 ಮಂದಿ ಅದೃಷ್ಟವಶಾತ್​ ಪ್ರಾಣಪಾಯದಿಂದ ಪಾರಾದರು. ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದ್ದು, ಬೆಂಕಿ ಕಾಡ್ಗಿಚ್ಚಿನಂತೆ ಹಬ್ಬಲು 234 ಮೊಬೈಲ್​ ಫೋನ್​ಗಳ ಸ್ಫೋಟ ಎನ್ನಲಾಗಿದೆ.

ಅಪಘಾತದ ಸಮಯದಲ್ಲಿ ಬಸ್‌ನಲ್ಲಿ ಒಟ್ಟು 44 ಪ್ರಯಾಣಿಕರು ಮತ್ತು ಇಬ್ಬರು ಚಾಲಕರಿದ್ದರು. ಆದರೆ, ಬಸ್​ ಬೆಂಕಿಗೆ ಆಹುತಿಯಾಗುವ ಮೊದಲೇ ಚಾಲಕರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ, ಇಬ್ಬರು ಚಾಲಕರ ವಿರುದ್ಧ ಕೇಸ್​ ದಾಖಲಾಗಿದ್ದು, ಬಂಧನಕ್ಕೆ ಹುಡುಕಾಟ ನಡೆಸಲಾಗುತ್ತಿದೆ. ಈ ಮಧ್ಯೆ, ಬಸ್ ಅಪಘಾತಕ್ಕೆ ಕಾರಣಗಳೇನು ಎಂಬುದರ ಬೆನ್ನತ್ತಿರುವ ವಿಧಿವಿಜ್ಞಾನ ತಂಡಗಳು, ಇದೀಗ ಹುಬ್ಬೇರಿಸುವ ಸಂಗತಿಯೊಂದನ್ನು ಪತ್ತೆಹಚ್ಚಿದೆ.

ಲಗೇಜ್ ಬಾಕ್ಸ್​

ಬಸ್​ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಬೈಕ್​ನ ಪೆಟ್ರೋಲ್​ ಟ್ಯಾಂಕ್​ನಿಂದ ಲೀಕ್ ಆದ ಇಂಧನವಾದರೆ, ಅಗ್ನಿ ಧಗಧಗನೆ ಹೊತ್ತಿ ಉರಿಯಲು ಬಸ್​ನ ಲಗೇಜ್​ ಬಾಕ್ಸ್​ನಲ್ಲಿದ್ದ 234 ಸ್ಮಾರ್ಟ್​ಫೋನ್‌ಗಳು ಎಂದು ವಿಧಿವಿಜ್ಞಾನ ತಂಡಗಳು ತಿಳಿಸಿವೆ. ಬೆಂಕಿ ಜ್ವಾಲೆಯಂತೆ ಹರಡಲು ಇದೇ ಪ್ರಮುಖ ಕಾರಣ ಎಂದು ಹೇಳಲಾಗಿದೆ. ಮೊದಲು ಲಗೇಜ್ ಕ್ಯಾಬಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿ ಮೊಬೈಲ್ ಫೋನ್‌ಗಳನ್ನು ಹೊಂದಿದ್ದ ಪಾರ್ಸೆಲ್ ಇತ್ತು. ವಿಪರೀತ ಕಾವಿನಿಂದ ಆ ಫೋನ್‌ಗಳ ಎಲ್ಲಾ ಬ್ಯಾಟರಿಗಳು ಏಕಾಏಕಿ ಸ್ಫೋಟಗೊಂಡಿವೆ.

'ಎನ್​ಡಿಟಿವಿ' ವರದಿಯ ಪ್ರಕಾರ, 234 ರಿಯಲ್​ಮಿ ಸ್ಮಾರ್ಟ್‌ಫೋನ್‌ಗಳು ಸ್ಫೋಟಗೊಂಡಿವೆ. ಇದರ ಮೌಲ್ಯ 46 ಲಕ್ಷ ರೂ.ಗಳಾಗಿದ್ದು, ಅವು ಹೈದರಾಬಾದ್ ಮೂಲದ ಉದ್ಯಮಿಯೊಬ್ಬರಿಗೆ ಸೇರಿದ್ದು ಎನ್ನಲಾಗಿದೆ. ಬೆಂಗಳೂರಿನಲ್ಲಿರುವ ಇ-ಕಾಮರ್ಸ್ ಕಂಪನಿಯಾದ ಫ್ಲಿಪ್‌ಕಾರ್ಟ್‌ಗೆ ಈ ಸ್ಟಾಕ್​ಗಳನ್ನು ಬಸ್​ ಮೂಲಕ ಕಳುಹಿಸಲಾಗಿತ್ತು.

16 ಚಲನ್​, ಹಲವು ಬಾರಿ ರೂಲ್ಸ್ ಬ್ರೇಕ್​!

ಇಲ್ಲಿಯವರೆಗೆ, ವಿಧಿವಿಜ್ಞಾನ ತಂಡವು ಬಸ್​ನಿಂದ 19 ಮೃತದೇಹಗಳನ್ನು ಹೊರತೆಗೆದಿದೆ. ಶವಗಳನ್ನು ಡಿಎನ್ಎ ಪರೀಕ್ಷೆಗಳ ಮೂಲಕ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಸಂದರ್ಭದಲ್ಲಿ, ಅಪಘಾತಕ್ಕೀಡಾದ ಬಸ್​ ಸ್ಥಿತಿ ಮತ್ತು ಬಸ್​ ಮೇಲಿರುವ ಚಲನ್​ಗಳ ಬಗ್ಗೆ ಇದೀಗ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿವೆ. ಅಪಘಾತಕ್ಕೀಡಾದ ಬಸ್ ಮೇಲೆ ಹಲವು ಟ್ರಾಫಿಕ್​ ದಂಡಗಳು ಬಾಕಿ ಉಳಿದಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಜನವರಿ 2024ರಿಂದ ಒಟ್ಟು 23,120 ರೂ. ದಂಡಗಳು ಬಾಕಿ ಇವೆ ಎನ್ನಲಾಗಿದೆ. ಕಳೆದ ವರ್ಷ ಜನವರಿ 27ರಿಂದ ಈ ವರ್ಷ ಅಕ್ಟೋಬರ್ 9ರವರೆಗೆ ಬಸ್ 16 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ತಿಳಿದುಬಂದಿದೆ. 9 ಬಾರಿ ಪ್ರವೇಶ ನಿಷೇಧಿತ ವಲಯಗಳನ್ನು ಪ್ರವೇಶಿಸಿದ್ದಕ್ಕಾಗಿ ಮತ್ತು ಅತಿ ವೇಗ ಹಾಗೂ ಅಪಾಯಕಾರಿ ಚಾಲನೆ ಮಾಡಿದ್ದಕ್ಕಾಗಿ ಈ ದಂಡಗಳನ್ನು ವಿಧಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net