

ಹೈದರಾಬಾದ್: ನಿನ್ನೆ ರಾತ್ರಿ ( Kurnool Bus Accident ) ಹೈದರಾಬಾದ್ ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಕರ್ನೂಲ್ ಜಿಲ್ಲೆಯ ಬಳಿ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತ ನಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಬಸ್ ನಾದ್ಯಂತ ವ್ಯಾಪಿಸಿತು. ಅಪಘಾತದಲ್ಲಿ 20 ಪ್ರಯಾಣಿಕರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ 11 ಮಂದಿ ಪತ್ತೆಯಾಗಿದ್ದು, ಇತರ 9 ಜನರ ವಿವರಗಳು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೆಲ್ಲೂರು ಜಿಲ್ಲೆಯ ವಿಂಜಾಮುರು ಮಂಡಲದ ಗೊಲ್ಲವರಿಪಲ್ಲಿಯ ನಿವಾಸಿಗಳಾದ ದಂಪತಿ ಹಾಗೂ ಇಬ್ಬರು ಮಕ್ಕಳು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರನ್ನು ವಿಂಜಾಮೂರ್ ಮಂಡಲದ ಗೊಲ್ಲವರಿಪಲ್ಲಿಯ ಗೊಲ್ಲ ರಮೇಶ್ (35), ಅನುಷಾ (30), ಮಾನ್ವಿತಾ (10) ಮತ್ತು ಮನೀಷ್ (12) ಎಂದು ಪೊಲೀಸರು ಗುರುತಿಸಿದ್ದಾರೆ. ಈ ಕುಟುಂಬವು ಬೆಂಗಳೂರಿನಲ್ಲಿ ನೆಲಸಿತ್ತು ಎನ್ನಲಾಗಿದೆ. ತಕ್ಷಣ ಅವರ ಸಂಬಂಧಿಕರು ಅವರಿಗೆ ಮಾಹಿತಿ ನೀಡಿದರು. ಘಟನೆ ನಡೆದ ಸ್ಥಳಕ್ಕೆ ತಲುಪಿದ ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.
ರಾತ್ರಿ 9.30 ಕ್ಕೆ ಪತಂಚೇರಿನಿಂದ ಹೊರಟ ಬಸ್, ಹೈದರಾಬಾದ್‌ನ ವಿವಿಧ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ತೆರಳಿತು. ಚಿನ್ನಟೇಕೂರಿನಲ್ಲಿ ದ್ವಿಚಕ್ರ ವಾಹನವೊಂದು ಬಸ್ಸಿನ ಕೆಳಗೆ ಸಿಲುಕಿಕೊಂಡು ಬೆಂಕಿ ಹೊತ್ತಿಕೊಂಡಿತು. ಬೆಂಕಿ ವೇಗವಾಗಿ ಹರಡಿ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಯಿತು. ಅಪಘಾತದ ಸಮಯದಲ್ಲಿ ಬಸ್‌ನಲ್ಲಿ 42 ಜನರು ಪ್ರಯಾಣಿಸುತ್ತಿದ್ದರು ಮತ್ತು ಕೇವಲ 12 ಜನರು ಮಾತ್ರ ಬದುಕುಳಿದಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಬಸ್‌ನಲ್ಲಿ ಸಿಲುಕಿದ್ದ 25 ಕ್ಕೂ ಹೆಚ್ಚು ಪ್ರಯಾಣಿಕರು ಬೆಂಕಿಯಲ್ಲಿ ಸುಟ್ಟು ಕರಕಲಾಗಿದ್ದಾರೆ. ಮೃತರಲ್ಲಿ ಕರ್ನಾಟಕದವರು ಇದ್ದಾರಾ? ಎನ್ನುವ ಕುರಿತಾಗಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಈ ಭೀಕರ ಅಪಘಾತಕ್ಕೆ ಕಾರಣವಾದ ಖಾಸಗಿ ಟ್ರಾವೆಲ್ಸ್ ಬಸ್ ಬಗ್ಗೆ ಸಾರಿಗೆ ಇಲಾಖೆಯ ತನಿಖೆ ನಡೆಸುತ್ತಿದೆ. ಈ ಘೋರ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಬಗ್ಗೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ತನಿಖೆಯನ್ನು ನಡೆಸುತ್ತಿದೆ. ತನಿಖೆ ನಂತರವಷ್ಟೆ ಸ್ಪಷ್ಟ ಕಾರಣ ತಿಳಿಯ ಬೇಕಿದೆ.
ಈ ಘಟನೆಯ ಬಗ್ಗೆ ಪೂರ್ಣ ಪ್ರಮಾಣದ ತನಿಖೆಗೆ ಆದೇಶಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿ ಪರಿಹಾರ ಘೋಷಿಸಿದ್ದಾರೆ.