

ರಾಣೆಬೆನ್ನೂರ: ಪ್ರಸ್ತುತ 21ನೇ ಶತಮಾನದಲ್ಲಿ ಬಹು ಮುಖ್ಯವಾಗಿ ಸಮುದಾಯದ ಜನರು ಅದರಲ್ಲೂ ಸ್ವ ಸಹಾಯ ಸಂದ ಮಹಿಳಾ ಸದಸ್ಯರು ಡಿಜಿಟಲ್ ಸಾಕ್ಷರತೆ ಪಡೆದುಕೊಳ್ಳುವುದು ಬಹಳ ಅವಶ್ಯಕವಾಗಿದೆ ಎಂದು ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಚಂದ್ರು ಎಚ್.ಎಂ. ಹೇಳಿದರು.
ಜಿಪಂ, ತಾಪಂ ಹಾಗೂ ಶಿಕ್ಷಣ ಪೌಂಡೇಷನ್ ವತಿಯಿಂದ ತಾಲೂಕಿನ ಕುಪ್ಪೇಲೂರ ಗ್ರಾಪಂನಲ್ಲಿ ಸೋಮವಾರ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರಿಗಾಗಿ ಏರ್ಪಡಿಸಿದ್ದ ಡಿಜಿಟಲ್ ಸಾಕ್ಷರತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಮಾನದಲ್ಲಿ ಪ್ರತಿಯೊಂದು ದೈನಂದಿನ ಕಾರ್ಯ ಚಟುವಟಿಕೆಗಳು ನಡೆಯುತ್ತಿರುವುದು ಮೊಬೈಲ್ ಫೋನ್ ಮುಖಾಂತರ. ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಡಿಜಿಟಲ್ ಸಾಕ್ಷರತೆಯನ್ನು ಪಡೆದುಕೊಂಡರೆ ಮುಂದಿನ ಸರ್ಕಾರದ ಎಲ್ಲ ಯೋಜನೆಗಳನ್ನ ತಮ್ಮ ಅಂಗೈಯಲ್ಲಿ ಮಾಹಿತಿ ಪಡೆದುಕೊಳ್ಳಲು ಸಹಾಯಕವಾಗುವುದು.
ಆದ್ದರಿಂದ ಫೋನ್ನಲ್ಲಿ ನಂಬರ್ ಸೇವ್ ಮಾಡುವುದು. ಸಂದೇಶಗಳನ್ನು ನೋಡುವುದು, ಫೋನ್ ಸುರಕ್ಷತೆಯನ್ನು ಯಾವ ರೀತಿಯಾಗಿ ಮಾಡಿಕೊಳ್ಳುವುದು. ಮಕ್ಕಳಿಂದ ಫೋನ್ಅನ್ನು ಯಾವ ರೀತಿಯಾಗಿ ಪೇರೆಂಟ್ ಕಂಟ್ರೋಲ್ ಮುಖಾಂತರ ನಿರ್ವಹಣೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯೆ ರೇಖಾ ಮಾದೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ರಾಮಣ್ಣ ಸಿರಿಗೇರಿ, ಶಿಲ್ಪಾ ಮಳೆಪ್ಪನವರ, ಕುಸುಮಾ ಮಣಕೂರ, ಎಂಬಿಕೆ ಒಕ್ಕೂಟದ ರೇಣುಕಾ ದಾಸರ, ಅರಿವು ಕೇಂದ್ರದ ಮೇಲ್ವಿಚಾರಕಿ ಯಲ್ಲಮ್ಮ ಕಿತ್ತೂರು ಮತ್ತಿತರರು ಉಪಸ್ಥಿತರಿದ್ದರು.